ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯ ಪ್ರೊ. ಪಿ.ಎಸ್. ಚೌಧರಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವದ್ವಯರು ಮಾತನಾಡಿದರು.
ಕಲಬುರಗಿಯನ್ನು ಕೌಶಲ್ಯ ಕೇಂದ್ರವಾಗಿಸುತ್ತೇವೆಂದ ಪ್ರಿಯಾಂಕ್ ಖರ್ಗೆ ಬೆಂಗಳೂರು ಹೊರತುಪಡಿಸಿ ಅದ್ಹೇಗೆ ಕೌಶಲ್ಯವನ್ನ ರಾಜ್ಯದ ಇತರೆ ನಗರಗಳಿಗೆ ಕೊಂಡೊಯ್ಯುವ ಸಾಧ್ಯಾಸಾಧ್ಯತೆಗಳನ್ನೆಲ್ಲ ಪರಿಶೀಲಿಸಿ ಸಲಹೆ. ಸೂಚನೆ ನೀಡುವುದಕ್ಕೇ ಕೌಶಲ್ಯ ಸಲಹಾ ಪರಿಷತ್ತನ್ನು ರಚಿಸಲಾಗಿದೆ ಎಂದರು.ಐಟಿಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಪರಿಣಿತರು, 51 ಕಂಪನಿಗಳು ಸೇರಿದಂತೆ ವಿವಿಧ ವಿಷಯಗಳ ಮೇಲಿನ 9 ಗುಂಪುಗಳನ್ನು ಮಾಡಲಾಗಿದ್ದು, ಈ ಪರಿಷತ್ತು ಅದಾಗಲೇ ಕಾರ್ಯತತ್ಪರವಾಗಿದ್ದು, ಜನೇವರಿ ಅಂತ್ಯದೊಳಗೆ ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಮುಂದಿನ ಪಂಚ ವರ್ಷಗಳಲ್ಲಿ ಕೌಶಲ್ಯ ಕರ್ನಾಟಕ ರಚನೆಗೆ ಏನೆಲ್ಲಾ ನೀಲ ನಕಾಶೆ ಬೇಕೋ ಅದೆಲ್ಲವೂ ಈ ವರದಿ ಹೊಂದಿರಲಿದೆ. ಇದನ್ನ ಸಾರ್ವಜನಿಕವಾಗಿಯೂ ಚರ್ಚೆಗೆ ಲಭ್ಯವಾಗಿಸುತ್ತೇವೆಂದು ಖರ್ಗೆ ಹೇಳಿದರು.
ಇದೀಗ ಅಪ್ ಸ್ಕಿಲ್ಲಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿದೆ. ಐಟಿಐ ಮುಗಿಸಿದ ವಿದ್ಯಾರ್ಥಿಗಳು ರೀ ಸ್ಕಿಲ್ಲಿಂಗ್, ಅಪ್ ಸ್ಕಿಲ್ಲಿಂಗ್ ಆಗುವ ಮೂಲಕ ವಿದೇಶಕ್ಕೆ ಬೇಕಾಗುವ ತರಬೇತಿ ಹೊಂದಿದ ಯುವಕರನ್ನು ಒದಗಿಸಲು ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಐ-ಫೋನ್ ತಯಾರಿಕ ಘಟಕ ಸ್ಥಾಪನೆ ಮಾಡುತ್ತಿದೆ. ಅದಕ್ಕೆ 48,000 ಜನ ತರಬೇತಿ ಹೊಂದಿದ ಯುವಕರು ಬೇಕಾಗುತ್ತದೆ ಎಂದು ಕಂಪನಿ ಬೇಡಿಕೆ ಇಟ್ಟಿದೆ. ಒಂದು ಪ್ರಮುಖ ಅಂಶವೆಂದರೆ ಈ ತರಹದ ಹೊಸ ಆವಿಷ್ಕಾರಗಳಿಗೆ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ. ನಾವೂ ಕೂಡಾ ಈ ವಿಷಯದಲ್ಲಿ ಅವರಂತೆ ಆಧುನಿಕ ಜಗತ್ತಿಗೆ ಅನುಕೂಲವಾಗುವಂತ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಉತ್ಪನ್ನ ಮಾಡಿದಾಗ ಮಾತ್ರ ಚೀನಾಗೆ ಸರಿಗಟ್ಟಬಹುದು ಎಂದರು.
ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು, ಕಲಬುರಗಿಯಲ್ಲೇ ಸ್ಕಿಲ್ಲಿಂಗ್ ಇನ್ನೋವೇಷನ್ ಹಾಗೂ ಇನ್ಕ್ಯೂಬೇಷನ್ ಸೆಂಟರ್ ನಿರ್ಮಾಣ ಮಾಡುವ ಆಲೋಚನೆ ಇದ್ದು ಶೀಘ್ರವೇ ರೂಪರೇಷೆ ಸಿದ್ಧಪಡಿಸಲಾಗುತ್ತದೆ ಎಂದರು.
ಕೆಲ ವರ್ಷಗಳ ಹಿಂದೆ ಕೈಗಾರಿಕ ತಯಾರಿಕೆಗೆ ಒತ್ತು ನೀಡಲಾಗುತ್ತಿತ್ತು. ಈಗ ತಾಂತ್ರಿಕತೆ ಹಾಗೂ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭಾರತದ ಮಾನವ ಸಂಪನ್ಮೂಲಕ್ಕೆ ಹೆಚ್ಚು ಬೇಡಿಕೆ ಇದೆ. ಸ್ಲೋವಾಕಿಯಾ ದೇಶದವರು 2000 ತರಬೇತಾದ ಐಟಿಐ ಪದವಿದರ ಬೇಡಿಕೆ ಇಟ್ಟಿದ್ದಾರೆ. ತರಬೇತಿ ನೀಡಿ 200 ಅಭ್ಯರ್ಥಿಗಳನ್ನು ಕಳಿಸಲಾಗುತ್ತದೆ, ಅವರಲ್ಲಿ ಕಲಬುರಗಿ ಯಿಂದ 20 ವಿದ್ಯಾರ್ಥಿಗಳು ಸೇರಿದ್ದಾರೆಂದರು.
ರಾಜ್ಯದಲ್ಲಿ 250 ಸರ್ಕಾರಿ ಐಟಿಐ ಕಾಲೇಜುಗಳು, 33 ಜಿಟಿಟಿಸಿ, ಕೆಜಿಟಿಟಿಐ ಸಂಸ್ಥೆಗಳಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಕಲಬುರಗಿ ಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಇತರೆ ತಾಂತ್ರಿಕ ಸಂಸ್ಥೆಗಳ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ವಿಭಾಗೀಯ ಜಂಟಿ ನಿರ್ದೇಶಕರಾದ ರವೀಂದ್ರನಾಥ ಬಾಳಿ, ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಇದ್ದರು.ಐಟಿಐ ಮಕ್ಕಳಿಗೆ ಬಿಸಿಯೂಟ- ಸೈಕಲ್ ಸವಲತ್ತು ಕೊಡಿ: