ಮಕ್ಕಳು ಕ್ರೀಡೆ ಜತೆಗೆ ಅಭ್ಯಾಸದ ಕಡೆಗೂ ಒತ್ತು ನೀಡಿ: ಶಾಸಕ ಎಚ್.ಕೆ.ಸುರೇಶ್

KannadaprabhaNewsNetwork | Published : Aug 22, 2024 12:48 AM

ಸಾರಾಂಶ

ವಿದ್ಯಾರ್ಥಿಗಳು ಕ್ರೀಡೆ ಜತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಒತ್ತು ನೀಡಬೇಕು. ಕ್ರೀಡೆಗೆ ಒಳ್ಳೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುವುದು ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು. ಹಳೆಬೀಡು ಎ ಮತ್ತು ಬಿ ವಲಯಗಳ ಹಿರಿಯ ಪ್ರಾಥಮಿಕ ಕ್ರೀಡಾಕೂಟದ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದರು.

ಸಲಹೆ । ಹಳೆಬೀಡಿನ ಹಿರಿಯ ಪ್ರಾಥಮಿಕ ಕ್ರೀಡಾಕೂಟ । ಸರ್ಕಾರಿ ಶಾಲೆಗೆ ಅಗತ್ಯ ಕ್ರೀಡಾ ಸಲಕರಣೆಗಳ ನೀಡುವ ಭರವಸೆ

ಕನ್ನಡಪ್ರಭ ವಾರ್ತೆ ಹಳೆಬೀಡು

ವಿದ್ಯಾರ್ಥಿಗಳು ಕ್ರೀಡೆ ಜತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಒತ್ತು ನೀಡಬೇಕು. ಕ್ರೀಡೆಗೆ ಒಳ್ಳೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುವುದು ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ಬೇಲೂರು ಶಿಕ್ಷಣ ಇಲಾಖೆ ಹಾಗೂ ಹಳೆಬೀಡಿನ ಶಾರದಾ ಪಬ್ಲಿಕ್ ಸ್ಕೂಲ್ ಜಂಟಿಯಾಗಿ ೨೦೨೪-೨೫ ನೇ ಸಾಲಿನ ಹಳೆಬೀಡು ಎ ಮತ್ತು ಬಿ ವಲಯಗಳ ಹಿರಿಯ ಪ್ರಾಥಮಿಕ ಕ್ರೀಡಾಕೂಟದ ಉದ್ಘಾಟನೆಯ ಸಮಾರಂಭವನ್ನು ನಡೆಸಿ ಮಾತನಾಡಿ, ಹಳೆಬೀಡು ಹೊಯ್ಸಳರ ಕಾಲದಲ್ಲಿ ಸಾಂಸ್ಕೃತಿಕ ನಗರವಾಗಿತ್ತು. ಈ ಕ್ಷೇತ್ರದಲ್ಲಿ ನನ್ನ ಅಭಿವೃದ್ದಿಗೆ ನಮ್ಮ ಸರ್ಕಾರವಿಲ್ಲದೆ ಅಭಿವೃದ್ದಿಗೆ ತೊಂದರೆಯಾಗದೆ. ನನ್ನ ಕಾರ್ಯದಲ್ಲಿ ಕೈಕಟ್ಟಿ ಕೂರಬಾರದು ಎಂದು ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಹಳೆಬೀಡು, ಜಾವಗಲ್ಲು ,ಬೇಲೂರು, ಗೆಂಡೆಹಳ್ಳಿಗೆ ಅಚ್ಚುಕಟ್ಟಾದ ಎಲ್ಲಾ ಕ್ರೀಡೆಗಳ ಸೌಲಭ್ಯ ಹೊಂದಿರುವ ಕ್ರೀಡಾಂಗಣಗಳ ಕಾರ್ಯ ನಿರ್ವಹಿಸಿದ್ದೇನೆ. ಹಳೆಬೀಡು ಕೆ.ಪಿ.ಎಸ್. ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತೋಷದ ವಿಚಾರ. ಈ ಸುಂದರ ದೇವಸ್ಥಾನದ ಮುಂಭಾಗದಲ್ಲಿ ನಮ್ಮ ಶಾಲೆ ಇರುವುದು ಒಂದು ಸೌಭಾಗ್ಯ. ದೇವಾಲಯಕ್ಕೆ ಯಾವುದೇ ಧಕ್ಕೆ ಇಲ್ಲದೆ ಶಾಲೆಗೆ ಒಳ್ಳೆಯ ಕಾಂಪೌಂಡ್ ಹಾಗೂ ಪಾರ್ಕಿನ ವ್ಯವಸ್ಥೆ ಮಾಡಲಾಗುವುದು. ಇಂದಿನ ಮಕ್ಕಳು ತಂದೆ ತಾಯಿ ಮತ್ತೆ ಗುರುವಿಗೆ ಗೌರವ ನೀಡಿದರೆ ನಿಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.

ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಹಿರಿಯ ಪ್ರಾಥಮಿಕ ಕ್ರೀಡಾಕೂಟದಲ್ಲಿ ಹಳೆಬೀಡಿನ ಎ ಮತ್ತು ಬಿ ವಲಯಗಳಿಂದ ಒಟ್ಟು ೨೭ ಶಾಲೆಗಳು ಆಗಮಿಸಿ ಇದರಲ್ಲಿ ೮ ಗೇಮ್ಸ್, ೧೦ ಅಥ್ಲೆಟಿಕ್ಸ್ ಆಟಗಳನ್ನು ಒಳಗೊಂಡು ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಮಕ್ಕಳು ಗಮನವಿಟ್ಟು ಕ್ರೀಡೆಯನ್ನು ಆಡಬೇಕು. ಅದೇ ರೀತಿ ಮಕ್ಕಳಲ್ಲಿ ಯಾವುದೇ ಭಿನ್ನ ಅಭಿಪ್ರಾಯ ಇರಬಾರದು. ಜೀವನದಲ್ಲಿ ಸೋಲು ಗೆಲುವು ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ಆಟದಲ್ಲಿ ಸೋಲು- ಗೆಲುವು ಎಂಬ ಭಾವನೆ ಇರಬಾರದು. ಆಟದ ಬಗ್ಗೆ ಆಸಕ್ತಿ ಹೆಚ್ಚಿನ ರೀತಿಯಲ್ಲಿ ಇರಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದ ರೂವಾರಿಗಳಾದ ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯತೀಶ್ ಹಾಗೂ ಕಾರ್ಯದರ್ಶಿ ನಂದಿನಿರವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಬಾಗವಹಿಸಿದ್ದ ವಿದ್ಯಾರ್ಥಿನಿ ಛಾಯಶ್ರೀಯಿಂದ ಕ್ರೀಡಾ ಜ್ಯೋತಿ ಬೆಳಗಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಶ್ಮಿ ವಿನಯ್, ಕೆ.ಪಿ.ಎಸ್ ಪ್ರಾಂಶುಪಾಲ ವಿನುತ, ಉಪಪ್ರಾಂಶುಪಾಲ ಮುಳ್ಳಯ್ಯ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ, ಕಾಲೇಜ್ ಅಭಿವೃದ್ಧಿ ಅಧ್ಯಕ್ಷ ಸೋಮಶೇಖರ್, ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಅಧ್ಯಕ್ಷರಾದ ಲೋಕೇಶ್, ನಾಗರಾಜ್, ಸಿ.ಆರ್.ಪಿ.ನಾರಾಯಣ್ ಸೋಮಶೇಖರ್ ಹಾಗೂ ಪೂರ್ಣೇಶ್, ರಘುಕುಮಾರ್ ಹಾಜರಿದ್ದರು.

Share this article