ಕಾರಟಗಿ: ವಿದ್ಯುತ್ ಖಾಸಗೀಕರಣ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಈ ಕೂಡಲೇ ಸರ್ಕಾರ ಟಾಟಾ ಪವರ್ ಪ್ರಸ್ತಾವಿತ ಮನವಿ ತಿರಸ್ಕರಿಸಬೇಕು ಎಂದು ಕವಿಪ್ರನಿನಿ ಅಧಿಕಾರಿಗಳ ಮತ್ತು ನೌಕರರ ಒಕ್ಕೂಟ (ಫೆಡರೇಶನ್) ವತಿಯಿಂದ ಸೋಮವಾರ ಸಂಜೆ ಜೆಸ್ಕಾಂ ನಿಗಮ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ವೇಳೆ ಜೆಸ್ಕಾಂ ಕಾರಟಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್ ಮಾತನಾಡಿ, 2003ರ ವಿದ್ಯುತ್ ಕಾಯಿದೆ ಸೆಕ್ಷನ್ 14ರ ಅಡಿ ಖಾಸಗಿ ಕಂಪನಿಗಳು ವಿತರಣಾ ಪರವಾನಗಿಗೆ ಅರ್ಜಿ ಹಾಕಿರುವ ಟಾಟಾ ಪವರ್ ಸಂಸ್ಥೆಯು ರಾಜ್ಯದ ವಿವಿಧ ಎಸ್ಕಾಂಗಳ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿಗೆ ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಕೆಇಆರ್‌ಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಜೂ.23ಕ್ಕೆ ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನವಾಗಿದೆ. ದಯವಿಟ್ಟು ರೈತರು, ಕಾರ್ಮಿಕ ಸಂಘ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸುವ ಮೂಲಕ ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಇದನ್ನೆಲ್ಲ ಮೀರಿ ಖಾಸಗೀಕರಣ ಜಾರಿಯಾದಲ್ಲಿ, ಮುಂದೆ, ನಮ್ಮ ನೌಕರರಷ್ಟೇ ಇಲ್ಲಿಂದ ಮೂಲೋತ್ಪಾಟನೆಯಾಗುವುದಿಲ್ಲ. ಜತೆಗೆ ರೈತರು, ಉದ್ಯಮಿಗಳು, ವ್ಯಾಪಾರಿಗಳು, ಜನ ಸಾಮಾನ್ಯರನ್ನೊಳಗೊಂಡ ಎಲ್ಲ ಗ್ರಾಹಕರು ಬೆಲೆ ಏರಿಕೆ ಸಂದರ್ಭದಲ್ಲಿ, ಈ ಸರ್ಕಾರಕ್ಕೆ ಪ್ರತಿಯೊಂದಕ್ಕೆ ಪ್ರಶ್ನೆ ಮಾಡಿದಂತೆ ಖಾಸಗಿಯವರ ಏಕ ಪಕ್ಷೀಯ ನಿರ್ಧಾರ ಪ್ರಶ್ನಿಸುವ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.
ಕವಿಪ್ರನಿ ನೌಕರರ ಸಂಘದ ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಬಾಲಚಂದ್ರ ಮಾತನಾಡಿ, ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1902ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಶಿವನಸಮುದ್ರದಲ್ಲಿ ವಿದ್ಯುತ್ ಕಂಡು ಹಿಡಿದಾಗಿನಿಂದ ಮೊದಲಾಗಿ ಇಲ್ಲಿಯವರೆಗೆ ಎಲ್ಲ ಎಸ್ಕಾಂಗಳ ನೌಕರರು ಈ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಇಂಥ ಬಲಿಷ್ಠ ಕ್ಷೇತ್ರ ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ವಿದ್ಯುತ್ ಖಾಸಗೀಕರಣವಾದಲ್ಲಿ ಸಾಮಾಜಿಕ ನ್ಯಾಯ ಅರಣ್ಯರೋಧನವಾಗಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗುವುದಿಲ್ಲ. ಕಂಪನಿಯವರು ನೇಮಕಾತಿಯಲ್ಲಿ ಹೊರ ರಾಜ್ಯದವರಿಗೆ ಆದ್ಯತೆ ನೀಡಿ ಸ್ಥಳೀಯ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ. ಅಲ್ಲದೆ ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುವುದು ಕಷ್ಟಕರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವೇಳೆ ಜೆಸ್ಕಾಂ ಉಪ ವಿಭಾಗದ ಜೆಇಗಳಾದ ಅಮರೇಶ್, ಭರತ್, ಖಾದರಭಾಷಾ, ನರಸಿಂಗ್, ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ದುರುಗಯ್ಯ, ಬಾಲಚಂದ್ರ, ಸದಸ್ಯರು ಹಾಗೂ ವಿದ್ಯುತ್ ಗುತ್ತಿಗೆದಾರರಾದ ಬಸಪ್ಪ ಬೂದಗುಂಪಾ, ಮಂಜುನಾಥ್, ಆದಯ್ಯಸ್ವಾಮಿ, ಪಂಪನಗೌಡ ಕೊಂತನೂರು ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಅಧಿಕಾರಿ-ನೌಕರರು ಇದ್ದರು.