ನಗರದ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆಯಲ್ಲಿ (ಸಿಎಂಟಿಐ) ಶುಕ್ರವಾರ ನಡೆದ ಸಂಸ್ಥೆಯ 65ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಆಧರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆಯಲ್ಲಿ (ಸಿಎಂಟಿಐ) ಶುಕ್ರವಾರ ನಡೆದ ಸಂಸ್ಥೆಯ 65ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಳೆದ 12 ವರ್ಷಗಳಲ್ಲಿ ಕೈಗಾರಿಕಾ ಸಂಶೋಧನೆಗೆ ಅತಿ ಹೆಚ್ಚು ಒತ್ತು ಕೊಡಲಾಗುತ್ತಿದೆ. ಉತ್ಪಾದನೆ ಮತ್ತು ಸಂಶೋಧನೆಗೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಕೈಗಾರಿಕಾ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುವುದರೊಂದಿಗೆ ಅಗಾಧವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದರು.
ತಾಂತ್ರಿಕ ಶಿಕ್ಷಣ ಪಡೆಯುವ ಅಭ್ಯರ್ಥಿಗಳಿಗೆ ಉದ್ಯೋಗ ಆಕಾಶ ಸಿಗುವುದು ಕಷ್ಟವೆನ್ನುವ ಪರಿಸ್ಥಿತಿಯ ನಡುವೆಯೂ ಎಂಜಿನಿಯರಿಂಗ್ ಮತ್ತು ಡಿಪ್ಲೋಮೊ ಓದಿರುವ ವಿದ್ಯಾರ್ಥಿಗಳಿಗೆ ವಿಫುಲವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಕೌಶಲ್ಯ ಆಧರಿತ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒತ್ತು ನೀಡುತ್ತಿದೆ ಎಂದು ಹೇಳಿದರು.
ಸಿಎಂಟಿಐ ಹೆಮ್ಮೆಯ ಸಂಸ್ಥೆ:ಬೆಂಗಳೂರು ನಗರದಲ್ಲಿ ಕೇಂದ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶ ರಕ್ಷಣೆ ಸೇರಿದಂತೆ ಹಲವಾರು ಸೂಕ್ಷ್ಮ ವಲಯಗಳಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ. ಈ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಕೇಂದ್ರ ಸರ್ಕಾರವು ಉದ್ದೇಶಿಸಿದೆ.
ಎಚ್‌ಎಂಟಿಗೆ ಕಾಯಕಲ್ಪ ಅಂತಿಮ ಹಂತ:
ಭಾರತದ ಪ್ರತಿಷ್ಠಿತ ಉದ್ಯಮಗಳಲ್ಲಿ ಒಂದಾದ ಹಿಂದುಸ್ತಾನ್ ಮಷೀನ್ ಟೂಲ್ಸ್ (ಎಚ್ಎಂಟಿ) ಕಂಪನಿಗೆ ಮರುಜೀವ ನೀಡುವ ಯೋಜನೆ ಅಂತಿಮ ಅಂತದಲ್ಲಿ ಇದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಚ್ಎಂಟಿ ಎಲ್ಲಾ ವಿಭಾಗಗಳನ್ನು ಕೇಂದ್ರ ಸರ್ಕಾರವು ಪುನರುಜ್ಜೀವನಗೊಳಿಸಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಡಿಪಿಆರ್ ಕೂಡ ಅಂತಿಮ ಹಂತದಲ್ಲಿದ್ದು, ಶೀರ್ಘದಲ್ಲೇ ವಿತ್ತ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇದೇ ವೇಳೆ ಸಿಎಂಟಿಐನಲ್ಲಿರುವ ಸುಧಾರಿತ ಎಂಜಿನಿಯರಿಂಗ್ ಸಾಮಗ್ರಿ ಪರೀಕ್ಷಾ ಸೌಲಭ್ಯ ಕೇಂದ್ರವನ್ನು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಸಂಸ್ಥೆಯ ಬಗ್ಗೆ ಮಾಹಿತಿ ಪಡೆದು ಸಚಿವರು, ಯುವ ವಿಜ್ಞಾನಿಗಳ ಜತೆ ಸಂವಾದವನ್ನೂ ನಡೆಸಿದರು. ಸಿಎಂಟಿಐ ನಿರ್ದೇಶಕ ಡಾ.ನಾಗಹನುಮಯ್ಯ ಸೇರಿದಂತೆ ಸಂಸ್ಥೆಯ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಚ್ಎಂಟಿಗೆ ಕಾಯಕಲ್ಪ
ಎಚ್ಎಂಟಿ ಕಂಪನಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯಿಂದ ವರದಿ ಪಡೆಯಲಾಗಿದೆ. ಈ ಸಮಿತಿ ಮಾಡಿರುವ ಅನೇಕ ಮೌಲಿಕ ಶಿಫಾರಸುಗಳ ಆಧಾರದಡಿ ಕಂಪನಿಯನ್ನು ಮೇಲೆತ್ತುವ ಯೋಜನೆ ಹಾಕಿಕೊಳ್ಳಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.