ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳ ಬದುಕಿನಲ್ಲಿ ಉದ್ಯೋಗವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿಗಳು ಉದ್ಯೋಗಿಗಳಾಗಿ, ಉದ್ಯಮಿಗಳಾಗಬೇಕು ಎಂದು ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಹೇಳಿದರು.ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೆಂಗಳೂರಿನ ಸ್ಪೆಕ್ಟ್ರಂ ಟ್ಯಾಲೆಂಟ್ ಮ್ಯಾನೇಜಮೆಂಟ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಿರುವ 2025ರ ಉದ್ಯೋಗ ಮೇಳವನ್ನು ಬುಧವಾರ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ನಮ್ಮ ಕಾಲೇಜಿನಲ್ಲಿ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ನಾವು ಉದ್ಯೋಗ ಮೇಳ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿದೆ. ಇಂತಹ ಮೇಳಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉದ್ಯೋಗವನ್ನು ಹೊಂದಬೇಕು. ನಮ್ಮ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಇಂತಹ ಉದ್ಯೋಗ ಮೇಳಗಳ ಮೂಲಕ ಉದ್ಯೋಗ ಪಡೆದು ಉತ್ತಮ ಸ್ಥಾನದಲ್ಲಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.ಬೆಂಗಳೂರಿನ ಸ್ಪೆಕ್ಟ್ರಂ ಟ್ಯಾಲೆಂಟ್ ಮ್ಯಾನೇಜಮೆಂಟ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ಪ್ರಭು.ಎಸ್ ಮಾತನಾಡಿ, ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿಸಿದ ನಂತರ ಅವರ ಜೀವನ ಆರ್ಥಿಕವಾಗಿ ಸದೃಢವಾಗ ಬೇಕಾದರೆ ಮೊದಲು ಉದ್ಯೋಗವನ್ನು ಮಾಡುವ ಮನೋಭಾವವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಡಾ.ಜಿ.ಜಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಸದಾಶಯದೊಂದಿಗೆ ಉದ್ಯೋಗ ಕೊಡುವವರನ್ನು ಹಾಗೂ ಉದ್ಯೋಗ ಆಕಾಂಕ್ಷಿಗಳನ್ನು ಈ ಮೇಳದ ಮೂಲಕ ಒಂದೇ ವೇದಿಕೆಯಲ್ಲಿ ಕರೆ ತಂದು ಉದ್ಯೋಗ ಅವಕಾಶವನ್ನು ಕಲ್ಪಿಸುವ ಕಾರ್ಯವನ್ನು ಕಾಲೇಜು ಮಾಡುತ್ತಿದೆ ಎಂದರು. ಕಂಪನಿಯ ಇನ್ನೋರ್ವ ಮಾನವ ಸಂಪನ್ಮೂಲ ಅಧಿಕಾರಿ ಸುಷ್ಮೀತಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಸ್ವಾಗತಿಸಿ, ಡಾ.ಸುಮಂಗಲಾ ಮೇಟಿ ನಿರೂಪಿಸಿ, ಉಪನ್ಯಾಸಕ ದೇವೆಂದ್ರ ನಾಯಕ ವಂದಿಸಿದರು.ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಪದವಿ ಪಡೆದಿರುವ 486 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 200 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ₹14,700 ಸಂಬಳದೊಂದಿಗೆ ವಸತಿ, ಊಟ ಹಾಗೂ ಸಾರಿಗೆ ವೆಚ್ಚವನ್ನು ಉಚಿತವಾಗಿ ನೀಡಲಾಗುತ್ತದೆಂದು ಎಂದು ಬೆಂಗಳೂರಿನ ಸ್ಪೆಕ್ಟ್ರಂ ಟ್ಯಾಲೆಂಟ್ ಮ್ಯಾನೇಜಮೆಂಟ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಭು ಎಸ್ ತಿಳಿಸಿದರು.