ಐದು ವಾರ ಊರಿಗೆ ಊರೇ ಖಾಲಿ ಖಾಲಿ!

KannadaprabhaNewsNetwork |  
Published : Feb 24, 2026, 03:45 AM IST
ಗ್ರಾಮದೇವತೆ ಜಾತ್ರೆಯ ಹಿನ್ನೆಲೆ ಊರಿನಿಂದ ಹೊರ ಹೋಗುತ್ತಿರುವ ಜನರು. | Kannada Prabha

ಸಾರಾಂಶ

ಗ್ರಾಮದೇವಿಯರ ಜಾತ್ರೆ ನಡೆಯುವ ದಿನದ ಮುಂಚೆ ಬರುವ 5 ಮಂಗಳವಾರ ಎಲ್ಲರೂ ಊರು ಬಿಟ್ಟು ಸೂರ್ಯಾಸ್ತದ ಬಳಿಕ ಮತ್ತೆ ಮನೆ ಸೇರಬೇಕು. ಅಂದು ಸಂಜೆವರೆಗೂ ಯಾರೂ ಊರಲ್ಲಿ ಇರುವಂತಿಲ್ಲ ಎಂಬುದು ಸಂಪ್ರದಾಯ.

ಈರಪ್ಪ ನಾಯ್ಕರ್‌

ಕಲಘಟಗಿ:

ಈ ಎರಡು ಊರುಗಳಲ್ಲಿ ಪ್ರತಿ ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಖಾಲಿ. ಪ್ರತಿ ಮನೆ, ಅಂಗಡಿ-ಮುಗ್ಗಟ್ಟುಗಳಿಗೆ ಬೀಗ!

ಇದು ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಚವರಗುಡ್ಡ ಗ್ರಾಮಗಳಲ್ಲಿನ ಸಂಪ್ರದಾಯ. ಮಿಶ್ರಿಕೋಟಿ ಗ್ರಾಮದಲ್ಲಿನ ಗ್ರಾಮ ದೇವತೆಯರಾದ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆಯ ಮುಂಚೆ ಬರುವ 5 ಮಂಗಳವಾರಗಳಂದು ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿರುವ ಪದ್ಧತಿ.

ಏನಿದು-ಏಕಿದು?

ಮಿಶ್ರಿಕೋಟಿಯಲ್ಲಿ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆಯನ್ನು 300ಕ್ಕೂ ಅಧಿಕ ವರ್ಷದಿಂದ ಆಚರಿಸಲಾಗುತ್ತಿತ್ತಂತೆ. ಆದರೆ, ಅದ್ಯೇಕೋ ಮಧ್ಯೆ ನಿಂತು ಹೋಗಿತ್ತು. 2013ರಲ್ಲಿ 2 ಊರುಗಳ ಹಿರಿಯರು ಸೇರಿಕೊಂಡು ಗ್ರಾಮದೇವತೆಯರ ಜಾತ್ರೆ ಮತ್ತೆ ಆಚರಿಸಲು ನಿರ್ಧರಿಸಿದ್ದಾರೆ. ಅದರಂತೆ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದೇವತೆಯರ ಜಾತ್ರೆ ಸಂಪ್ರದಾಯದಂತೆ ನಡೆಯುತ್ತಿದೆ.

ಜಾತ್ರೆ ನಡೆಯುವ ದಿನದ ಮುಂಚೆ ಬರುವ 5 ಮಂಗಳವಾರ ಎಲ್ಲರೂ ಊರು ಬಿಟ್ಟು ಸೂರ್ಯಾಸ್ತದ ಬಳಿಕ ಮತ್ತೆ ಮನೆ ಸೇರಬೇಕು. ಅಂದು ಸಂಜೆವರೆಗೂ ಯಾರೂ ಊರಲ್ಲಿ ಇರುವಂತಿಲ್ಲ ಎಂಬುದು ಸಂಪ್ರದಾಯ. ಅದರಂತೆ ಬೆಳಗ್ಗೆಯೇ ಎದ್ದು ಎಲ್ಲರೂ ಮನೆಯಲ್ಲೇ ಅಡುಗೆ ಕಟ್ಟಿಕೊಂಡು ಹೊಲ-ಗದ್ದೆಗಳಲ್ಲಿ ಸೇರಿಕೊಳ್ಳುತ್ತಾರೆ. ಅಲ್ಲೇ ಊಟ ಮಾಡಿ, ಹರಟೆ ಹೊಡೆದು, ಆಟ ಆಡಿ ಮತ್ತೆ ಮನೆ ಸೇರುವುದು ಸಂಜೆಗೆ. ಅಂದು ಯಾರೊಬ್ಬರು ಕೆಲಸಕ್ಕೂ ಹೋಗಲ್ಲ.

ಮಾರ್ಚ್‌ 1ರಂದು ಮಿಶ್ರಿಕೋಟಿಯಲ್ಲಿ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆ ಇದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ದೇವಿಯರ ಮೆರವಣಿಗೆ ನಡೆಯಲಿದೆ. ಭಂಡಾರ ಜಾತ್ರೆಯೇ ಇಲ್ಲಿನ ವಿಶೇಷ. ಊರು ಬಿಡಲು ಇಂದು ಕೊನೆಯ ಮಂಗಳವಾರ.

ಚವರಗುಡ್ಡ ಏಕೆ?

ಜಾತ್ರೆ ನಡೆಯುವುದು; ದೇವಸ್ಥಾನ ಇರುವುದು ಮಿಶ್ರಿಕೋಟಿಯಲ್ಲಿ. ಆದರೆ ದ್ಯಾಮವ್ವ ದೇವಿಯನ್ನು ಚವರಗುಡ್ಡ ಗ್ರಾಮದ ಮಗಳೆಂದು ಪೂಜಿಸಲಾಗುತ್ತದೆ. ಮಗಳನ್ನು ಪಕ್ಕದ ಮಿಶ್ರಿಕೋಟಿ ಗ್ರಾಮಕ್ಕೆ ಕನ್ಯೆಯಾಗಿ ಧಾರೆ ಎರೆದುಕೊಡಲಾಗುತ್ತದೆ. ಇನ್ನು ಮಿಶ್ರಿಕೋಟಿಯ ಮಗಳೆಂದು ಪೂಜಿಸುವ ದುರ್ಗವ್ವ ದೇವಿಯನ್ನು ಈ ಗ್ರಾಮದ ಪಕ್ಕದಲ್ಲಿನ ಹುಲ್ಲಂಬಿ ಗ್ರಾಮಕ್ಕೆ ಕನ್ಯೆಯಾಗಿ ಧಾರೆ ಎರೆದುಕೊಡಲಾಗಿದೆ ಎಂಬ ನಂಬುಗೆ ಗ್ರಾಮಸ್ಥರದು. ಹೀಗಾಗಿ ಚವರಗುಡ್ಡದವರೂ ಮಿಶ್ರಿಕೋಟಿಗ್ರಾಮದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಎಲ್ಲ ಸಂಪ್ರದಾಯಗಳನ್ನು ಆಚರಿಸುತ್ತಾರೆ.

ಮಿಶ್ರಿಕೋಟಿ ಮಗಳಾಗಿರುವ ದುರ್ಗಾ ದೇವಿಯನ್ನು ಕನ್ಯೆಯಾಗಿ ಸ್ವೀಕರಿಸಿ ಪೂಜಿಸುವ ಹುಲ್ಲಂಬಿ ಗ್ರಾಮದವರು ಜಾತ್ರೆಯ ವೇಳೆ ಮಿಶ್ರಿಕೋಟಿಗೆ ಬಂದು ಉಡಿ ತುಂಬಿ ಹೋಗುವುದು ಪದ್ಧತಿ.

ಗ್ರಾಮದೇವಿ ಜಾತ್ರೆಯೂ ಮಿಶ್ರಿಕೋಟಿ, ಚವರಗುಡ್ಡ ಗ್ರಾಮಗಳ ನಡುವೆ ಬಾಂಧವ್ಯ ಬೆಸೆಯುವ ಹಬ್ಬ. 200-300 ವರ್ಷಗಳ ಹಿಂದೆ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ, ಮಧ್ಯೆ ಜಾತ್ರೆ ಸ್ಥಗಿತಗೊಂಡಿತ್ತು. ಇದೀಗ 15 ವರ್ಷಗಳಿಂದ 5 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರಲಾಗುತ್ತಿದೆ.

ನಾಗೇಂದ್ರ ಲಂಗೋಟಿ, ಅಧ್ಯಕ್ಷರು, ಶ್ರೀ ಗ್ರಾಮದೇವಿ ಜೀರ್ಣೋದ್ಧಾರ ಸಮಿತಿ.ನಮ್ಮೂರು ಕಲಘಟಗಿ ತಾಲೂಕಲ್ಲೇ ದೊಡ್ಡ ಗ್ರಾಮ. ಹಿಂದೆ ಜಾತ್ರೆ ಬಂದ್‌ ಆಗಿತ್ತು. ಊರಿನ, ನಾಡಿನ ಒಳತಿಗಾಗಿ ಮತ್ತೆ ಜಾತ್ರೆ ಮಾಡುತ್ತಿದ್ದೇವೆ. ಹಿರಿಯರು ತಿಳಿಸಿದ ಸಂಪ್ರದಾಯದಂತೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದೇವೆ. ಜಾತ್ರೆಯಿಂದ ಎರಡು ಗ್ರಾಮಗಳಲ್ಲಿ ಪ್ರೀತಿ, ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿದೆ.

ಐ.ಎಸ್‌. ಕಲಘಟಗಿ, ನಿವೃತ್ತ ಪ್ರಾಚಾರ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಂದಲಗಳಿಗೆ ಶೀಘ್ರ ತೆರೆ: ಸತೀಶ್ ಜಾರಕಿಹೊಳಿ
ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಡಾ. ಪ್ರಕಾಶ ಸಂಕನೂರ