ಹುಬ್ಬಳ್ಳಿ: ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಹಿಂದೆ ಬಣಜಿಗ ಸಮಾಜದವರು ಮುಖ್ಯವಾಗಿ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಇಂದು ಸಮಾಜದ ಯುವಕರು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ. ಪ್ರತಿಭಾ ಪುರಸ್ಕಾರ ನೀಡುವುದಷ್ಟೇ ಸಾಕಾಗುವುದಿಲ್ಲ. ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುವ ಕೆಲಸವನ್ನು ಸಮಾಜದ ಸಂಘಟನೆಗಳು ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವಜನತೆಗೆ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂತಹ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಘಟನೆಗಳು ಮಾರ್ಗದರ್ಶನ ನೀಡಿದರೆ ಇನ್ನಷ್ಟು ಯುವಕರು ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಮಾಜ ಬೆನ್ನುತಟ್ಟುವ ಕಾರ್ಯ ಮಾಡುತ್ತಿದೆ. ಇಂದು ನೀವು ಪ್ರಶಸ್ತಿ ಪಡೆಯುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇದೇ ವೇದಿಕೆಯಲ್ಲಿ ನಿಂತು ನಿಮ್ಮಂತೆಯೇ ಮತ್ತಷ್ಟು ವಿದ್ಯಾರ್ಥಿಗಳನ್ನು ಸನ್ಮಾನಿಸುವ ಸ್ಥಾನಕ್ಕೆ ಬೆಳೆಯಬೇಕು. ಸಮಾಜದ ಭವನ ನಿರ್ಮಾಣದ ಬೇಡಿಕೆ ಕುರಿತು ಮಾತನಾಡಿ, ಸಮಾಜ ಬಾಂಧವರು ಜಾಗ ಗುರುತಿಸಿದಲ್ಲಿ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಇದರ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡುವುದಾಗಿ ಹೇಳಿದರು.
ವಿಪ ಸದಸ್ಯ ಪ್ರದೀಪ ಶೆಟ್ಟರ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಮಂಜುನಾಥ ಮುನವಳ್ಳಿ, ವೀರಣ್ಣ ಮಳಗಿ, ಶಿವಶಂಕರ ಹಂಪಣ್ಣವರ, ಶಂಕ್ರಣ್ಣ ಮುನವಳ್ಳಿ, ವಿಜಯಕುಮಾರ ಶೆಟ್ಟರ್ ಸೇರಿದಂತೆ ಹಲವರಿದ್ದರು. ಭುವನೇಶ ಟೊಂಗಳಿ ಹಾಗೂ ಶೋಭಾ ಜಾಬಿನ್ ಪ್ರಾರ್ಥಿಸಿದರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಗುರುಪಾದಪ್ಪ ಶಿರೂರ ಸ್ವಾಗತಿಸಿದರು.