ಬಳ್ಳಾರಿ: ಒತ್ತುವರಿಯಾಗಿದ್ದ ನಗರ ಹೊರ ವಲಯದ ಬಂಡಿಹಟ್ಟಿಯ ರೆಡ್ಡಿ ಕಾಂಪೌಂಡ್ ಬಳಿಯ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ನಗರದ ಪ್ರಭಾವಿ ವ್ಯಕ್ತಿಯೊಬ್ಬರ ಬೆಂಬಲದಿಂದ ಅನ್ಯ ವ್ಯಕ್ತಿಯೊಬ್ಬ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ. ಹೀಗಾಗಿ ಸೂಕ್ತ ದಾಖಲೆಗಳಿದ್ದರೂ ಜಿಲ್ಲಾಡಳಿತ ಜಮೀನು ತೆರವುಗೊಳಿಸಲು ಈ ವರೆಗೆ ಮೀನಮೇಷ ಎಣಿಸಿತ್ತು. ಮಹಾನಗರ ಪಾಲಿಕೆಯ ಸದಸ್ಯರ ಒತ್ತಾಯದ ಮೇರೆಗೆ ನಗರದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಎಡಿಸಿ ಮೊಹಮ್ಮದ್ ಝುಬೇರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಬಂಡಿಹಟ್ಟಿಯಲ್ಲಿ ವ್ಯಕ್ತಿಯೊಬ್ಬರು ಸರ್ಕಾರಿ ಜಮೀನು ಅತಿಕ್ರಮಣ ಮಾಡಿದ್ದಾರೆ ಎಂಬ ನಿಖರ ಮಾಹಿತಿ ಹಾಗೂ ಸೂಕ್ತ ದಾಖಲೆಗಳು ಸಿಕ್ಕ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡಸಿ, ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಂಡಿದೆ. ಕಾರ್ಯಾಚರಣೆ ವೇಳೆ ಬುಡಾ ಆಯುಕ್ತ ಖಲೀಲ್ ಸಾಬ್, ಬಳ್ಳಾರಿ ತಹಸೀಲ್ದಾರ್ ರೇಖಾ ಮತ್ತು ಸಿಬ್ಬಂದಿ ಇದ್ದರು.ಜಿಲ್ಲಾಡಳಿತ ಇದೀಗ ವಶಪಡಿಸಿಕೊಂಡಿರುವ ಜಾಗ ₹10ರಿಂದ ₹12 ಕೋಟಿ ಮೌಲ್ಯದ್ದಾಗಿದೆ. ಹೀಗಾಗಿಯೇ ಇದನ್ನು ತೆರವುಗೊಳಿಸಲು ರಾಜಕೀಯ ಒತ್ತಡಗಳು ಹೆಚ್ಚಿದ್ದವು. ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಅಕ್ರಮ ಜಮೀನನ್ನು ತೆರವುಗೊಳಿಸಿ, ವಶಕ್ಕೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಡಿಸಿ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ತೆರವುಗೊಂಡ ಜಾಗದಲ್ಲಿ ಜಿಲ್ಲಾಡಳಿತ ಸರ್ಕಾರಿ ಶಾಲೆಯೊಂದನ್ನು ನಿರ್ಮಿಸುವ ಉದ್ದೇಶ ಹೊಂದಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ.
ಅತಿಕ್ರಮಣವಾಗಿದ್ದ ಬಂಡಿಹಟ್ಟಿಯ ಸರ್ಕಾರಿ ಜಮೀನು ವಶಪಡಿಸಿಕೊಂಡಿರುವ ಬೆನ್ನಲೇ ಜಿಲ್ಲಾಡಳಿತ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಅತಿಕ್ರಮಣವಾಗಿರುವ ಜಾಗವನ್ನು ಮರು ವಶಕ್ಕೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸರ್ಕಾರಿ ಜಮೀನಿನ ತೆರವು ಕಾರ್ಯಾಚರಣೆ ಶುರುಗೊಳ್ಳುವ ಸಾಧ್ಯತೆಯಿದೆ.