ಅರಣ್ಯ ಇಲಾಖೆಯಿಂದ ರೈತರಿಗೆ ಮಾಹಿತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಪುತ್ತೂರುಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುವುದು ಭವಿಷ್ಯದಲ್ಲಿ ಅಪಾಯಕಾರಿಯಾಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಹಣ ವ್ಯರ್ಥವಾಗುತ್ತದೆ. ಒತ್ತುವರಿ ಮಾಡಿದ ಬಗ್ಗೆ ೭೦೦ ಪ್ರಕರಣವಿದ್ದು, ಭವಿಷ್ಯದಲ್ಲಿ ಇದಕ್ಕೆ ಸೂಕ್ತ ಕ್ರಮವಾಗುತ್ತದೆ. ಅರಣ್ಯ ಪ್ರದೇಶದಿಂದ ೧೦೦ ಮೀ. ಸುತ್ತಲ ಪ್ರದೇಶವನ್ನು ಬಫರ್ ಭೂಮಿಯಾಗಿ ಕಾಯ್ದಿರಿಸಲಾಗಿದೆ. ಅರಣ್ಯ ಗುಪ್ಪೆಯ ಒಳಗಿರುವ ಭೂಪ್ರದೇಶದಲ್ಲಿ ಚಟುವಟಿಕೆ ನಡೆಸಿದರೆ ಅರಣ್ಯ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ತಿಳಿಸಿದರು.ಅವರು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಪುತ್ತೂರಿನ ಎಸ್‌ಕೆಎಎಂಎಸ್ ಕಟ್ಟಡದಲ್ಲಿರುವ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಕಾಡು ಪ್ರಾಣಿಗಳ ಹಾವಳಿ ತಡೆಗೆ ಮಾರ್ಗೋಪಾಯ, ಕೋವಿ ಪರವಾನಗಿ ಹಾಗೂ ಕಳ್ಳಕಾಕರಿಂದ ಅರಣ್ಯ ಉಳಿಸುವ ಬಗ್ಗೆ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತಣಾಡಿದರು.ಕಾಡುಪ್ರಾಣಿಗಳಿಂದಾದ ಕೃಷಿ ಹಾನಿಗೆ ೨೮ ಲಕ್ಷ ರು. ಪರಿಹಾರ ರೈತರಿಗೆ ನೀಡಲಾಗಿದ್ದು, ೫೦ ಲಕ್ಷ ರು. ಪರಿಹಾರ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಮರ ತೆರವಿನ ಬಗ್ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಇರುವ ರಸ್ತೆಯ ದುರಸ್ತಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗುತ್ತದೆ. ಪುತ್ತೂರು ವ್ಯಾಪ್ತಿಯಲ್ಲಿ ಮೂರು ಆನೆಗಳಿದ್ದು, ಸದ್ಯ ಕಾಡು ಸೇರಿಕೊಂಡಿದೆ. ಸರ್ಕಾರ ಆದೇಶ ಮಾಡಿದರೆ, ಮಂಗಳ ಹಾವಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯು.ಕೆ.ಟಿ.ಸಿ.ಎಲ್. ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ಐತ್ತಪ್ಪ ರೈ, ಇದಿನಬ್ಬ ಬಂಟ್ವಾಳ, ಹೆನ್ರಿ ಡಿಸೋಜ, ಶಿವಚಂದ್ರ ಈಶ್ವರಮಂಗಲ, ಇಸುಬು ಪುಣಚ, ಹರ್ಷ ಜೈನ್ ಬಿಳಿಯೂರು, ತುಳಸಿ ಪೆರಾಬೆ, ಹರಿಣಾಕ್ಷಿ ಸಂಪ್ಯ, ಕಲ್ಪನಾ ಶೆಣೈ ಉಪಸ್ಥಿತರಿದ್ದರು.