ಬಹಳ ಕುತೂಹಲ ಮೂಡಿಸಿದ್ದ ನಗರದ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ 40 ವರ್ಷದಷ್ಟು ಹಳೆ ಅಂಗಡಿಗಳನ್ನು ಬುಧವಾರ ಬೆಳಗಿನ ಜಾವ ಕೇಂದ್ರ ಪಾಲಿಕೆ ಅಧಿಕಾರಿಗಳ ತಂಡ ತೆರವುಗೊಳಿಸಿದೆ. ಇದಲ್ಲದೆ, ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಜಿಬಿಎ ಅಧಿಕಾರಿಗಳ ತಂಡ ಪಾದಚಾರಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಹಳ ಕುತೂಹಲ ಮೂಡಿಸಿದ್ದ ನಗರದ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ 40 ವರ್ಷದಷ್ಟು ಹಳೆ ಅಂಗಡಿಗಳನ್ನು ಬುಧವಾರ ಬೆಳಗಿನ ಜಾವ ಕೇಂದ್ರ ಪಾಲಿಕೆ ಅಧಿಕಾರಿಗಳ ತಂಡ ತೆರವುಗೊಳಿಸಿದೆ. ಇದಲ್ಲದೆ, ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಜಿಬಿಎ ಅಧಿಕಾರಿಗಳ ತಂಡ ಪಾದಚಾರಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದೆ.
ಕೇಂದ್ರ ಪಾಲಿಕೆ ವ್ಯಾಪ್ತಿಯ ಕೆ.ಆರ್.ಮಾರುಕಟ್ಟೆ ಬಳಿ ಕೋಟೆಗೋಡೆಗೆ ಅಂಟಿಕೊಂಡಂತೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಕಾಂಪೌಂಟ್‌ಗೆ ಸೇರಿಕೊಂಡಂತೆ ಪಾದಚಾರಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ಅಂಗಡಿಗಳನ್ನು ಬಿಗಿಪೊಲೀಸ್ ಬಂದೋಬಸ್ತ್‌ನೊಂದಿಗೆ ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಆರೋಗ್ಯಾಧಿಕಾರಿ ವೆಂಕಟೇಶ್ ತೆರವುಗೊಳಿಸಿದರು.
ಸುಮಾರು 220 ಅಂಗಡಿಗಳ ಮಾಲಿಕರು ಅನಧಿಕೃತ ವ್ಯಕ್ತಿಯೊಬ್ಬರಿಗೆ ತಲಾ 2ರಿಂದ 3 ಲಕ್ಷ ರು. ಮುಂಗಡ ನೀಡಿ ಈ ಅಂಗಡಿಗಳನ್ನು ಪಡೆದಿದ್ದರು ಎನ್ನಲಾಗಿದೆ. ಇದಲ್ಲದೆ, ತಿಂಗಳಿಗೆ 6000 ರು. ಬಾಡಿಗೆಯನ್ನೂ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನಗರದ ಹೈಕೋರ್ಟ್ ಗೆ ಒತ್ತುವರಿ ತೆರವು ವಿರುದ್ಧ ಇಲ್ಲಿನ ವ್ಯಾಪಾರಿಗಳು ದಾವೆ ಹೂಡಿದ್ದರು. ನ್ಯಾಯಾಲಯ ಅಧಿಕೃತವಲ್ಲದ ಯಾವುದೇ ಅಂಗಡಿಗಳನ್ನು 15 ದಿನ ಕಾಲಾವಕಾಶ ನೀಡಿ ತೆರವು ಮಾಡಬಹುದು ಎಂದು ಆದೇಶ ನೀಡಿತ್ತು.
ಜಿಬಿಎ ಅಧಿಕಾರಿಗಳು ನ್ಯಾಯಾಲಯ ನೀಡಿದ ಅವಧಿಗಿಂತ 4 ದಿನ ಹೆಚ್ಚುವರಿಯಾಗಿ ಅವಕಾಶ ನೀಡಿ ವ್ಯಾಪಾರಿಗಳ ಸರಕು ಪದಾರ್ಥಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿತ್ತು. ಬುಧವಾರ ಬೆಳಗಿನ ಜಾವ ಪಾಲಿಕೆ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆ ಆರಂಭಿಸಿತು. ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಎಲ್ಲಾ ಅಂಗಡಿಗಳನ್ನು ತೆರವು ಮಾಡಿದೆ.
ತೆರವು ಸಂದರ್ಭ ಹಲವರು ಜಿಬಿಎ ಲೈಸೆನ್ಸ್ ನೀಡಿದೆ ಎಂದು ಹೇಳಲು ಅಧಿಕಾರಿಗಳ ಬಳಿ ಬರುತ್ತಿದ್ದರು. ಆದರೆ, ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇವೆಲ್ಲಾ ಪ್ರಯೋಜನವಿಲ್ಲ ಎಂದು ಹೇಳಿ ತೆರವು ಕಾರ್ಯಾಚರಣೆ ಮುಂದುವರಿಸಿದರು. ಬೆಳಗ್ಗೆ ಸಚಿವ ಕೃಷ್ಣಭೈರೇಗೌಡ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ಆದೇಶಗಳೆಲ್ಲವೂ ನಕಲಿ, ಮಧ್ಯವರ್ತಿಗಳು ಪಾಲಿಕೆಯ ನಕಲಿ ಸೀಲು ಸಹಿ ಮಾಡಿ ಲೈಸೆನ್ಸ್ ಪ್ರತಿ ಸೃಷ್ಟಿಸಿರುವುದು ಪತ್ತೆಯಾಗಿದೆ. ಈ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ನ್ಯಾಯಾಲಯ ತೆರವು ಮಾಡಲು ಅನುಮತಿ ನೀಡಿತು ಎಂದರು.
ಮರುಆಕ್ರಮಣದ ವಿರುದ್ಧ ಭಾರಿ ದಂಡ
ಎಚ್‌ಎಸ್ಆರ್ ಲೇಔಟ್‌ನ 17ನೇ ಕ್ರಾಸ್ ಮತ್ತು 27ನೇ ಮೇನ್ ರಸ್ತೆಗಳು ಸೇರಿದಂತೆ ಪಾಲಿಕೆಯ ವಿವಿಧೆಡೆ ಒತ್ತುವರಿ ತೆರವುಗೊಳಿಸಿದ ನಂತರವೂ ಫಾಸ್ಟ್ ಫುಡ್ ಹೋಟೆಲ್ ಹಾಗೂ ತಳ್ಳು ಅಂಗಡಿಗಳು ಮತ್ತೆ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇಂತಹ ಮರು-ಆಕ್ರಮಣ ಮಾಡುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ, ವಾಹನಗಳು ಮತ್ತು ಸಾಮಗ್ರಿಗಳನ್ನು ಜಪ್ತಿ ಮಾಡಿ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ತಿಳಿಸಿದರು.
ಪ್ರತಿದಿನ 20 ಕೀ.ಮೀ. ಒತ್ತುವರಿ ತೆರವು
ಪ್ರತಿದಿನ 20 ರಿಂದ 25 ಕೀ.ಮೀ. ಫುಟ್‌ಪಾತ್ ಒತ್ತುವರಿ ತೆರವು ಮಾಡಲು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರ ಸಂಚಾರಕ್ಕೆ ಮುಕ್ತ ವಾತಾವರಣ ಕಲ್ಪಿಸಲು ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಸುಮಾರು ಒಟ್ಟು 311 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿಯಾಗಿದ್ದು ಈ ಪೈಕಿ ಇದುವರೆಗೆ 116 ಕಿ.ಮೀ. ಭಾಗ ಒತ್ತುವರಿ ಮುಕ್ತಗೊಳಿಸಲಾಗಿದೆ. ಉಳಿದ ಭಾಗದಲ್ಲಿ ಪ್ರತಿದಿನ 20 ರಿಂದ 25 ಕಿ.ಮೀ.ನಷ್ಟು ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಉತ್ತರ ಪಾಲಿಕೇಲಿ 4.20 ಕಿ.ಮೀ ಒತ್ತುವರಿ ತೆರವು
ಉತ್ತರ ಪಾಲಿಕೆಯ ಯಲಹಂಕ ವಿಭಾಗದಲ್ಲಿ ಹೆಸರಘಟ್ಟ ಮುಖ್ಯ ರಸ್ತೆ (ಎಂ.ಎಸ್. ಪಾಳ್ಯ ವೃತ್ತದಿಂದ ನಯಾರಾ ಪೆಟ್ರೋಲ್ ಬಂಕ್‌ವರೆಗೆ)2.20 ಕಿ.ಮೀ., ಬ್ಯಾಟರಾಯನಪುರ ವಿಭಾಗದಲ್ಲಿ ಅಮೃತಹಳ್ಳಿ ಮುಖ್ಯ ರಸ್ತೆ (ಬ್ಯಾಟರಾಯನಪುರ ಕಚೇರಿಯಿಂದ ದಾಸರಹಳ್ಳಿ ಕೆರೆವರೆಗೆ)2.00 ಕಿ.ಮೀ. ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.