ಕಾರಟಗಿ: ತುಂಗಭದ್ರ ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೆಳ ಮತ್ತು ಕೊನೆ ಭಾಗದ ರೈತರಿಗೆ ಕಾಡುತ್ತಿದ್ದ ನೀರಾ`ವರಿ’ ಸಮಸ್ಯೆ ಈಗ ಬಗೆಹರಿದಿದೆ.
ಮಳೆಗಾಲ ಮತ್ತು ಬೇಸಿಗೆ ಬೆಳೆಗೂ ನೀರಾವರಿ ವ್ಯಾಪ್ತಿಯ ಸುಮಾರು ೧೧ಕ್ಕೂ ಹೆಚ್ಚು ಗ್ರಾಮಗಳ ರೈತರು ಪ್ರತಿ ವರ್ಷ ನೀರಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಈಗ ಅಂತ್ಯ ಹಾಡುವ ಕಾಲ ಬಂದಿದೆ.ಉಳೇನೂರು ಏತನೀರಾವರಿ ಯೋಜನೆ ಸಂಪೂರ್ಣ ಜಾರಿಯಾಗುವ ಮೂಲಕ ಸುಮಾರು ೨ದಶಕಗಳಿಂದ ಕಾಡುತ್ತಿದ್ದ ಕೊನೆ ಮತ್ತು ಕೆಳಭಾಗದ ನೀರಿನ ಸಮಸ್ಯೆ ಈಗ ಬಗೆಹರಿದಂತಾಗಿದೆ. ಆ ಮೂಲಕ ೧೧ ಹಳ್ಳಿ, ಕ್ಯಾಂಪ್ ವ್ಯಾಪ್ತಿಯಲ್ಲಿ ಸುಮಾರು ೧೫೦೦೦ಹೆಕ್ಟೇರ್ ಪ್ರದೇಶಕ್ಕೆ ತುಂಗಭದ್ರ ನದಿ ನೀರು ಎತ್ತುವ ಮೂಲಕ ೩೧ನೇ ಕಾಲುವೆ ವ್ಯಾಪ್ತಿಯ ಕೊನೆ ಭಾಗದ ಕಾಲುವೆ ಮತ್ತು ಉಪಕಾಲುವೆಗಳಿಗೆ ನೀರು ಹರಿಸುವ ಮಹತ್ವಕಾಂಕ್ಷಿ ಯೋಜನೆ ಸೆ. ೨೯ ಸೋಮವಾರದಂದು ಲೋಕಾರ್ಪಣೆಯಾಗಲಿದೆ. ಇದರಿಂದ ಕೊನೆ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ.
ರೈತರ ಬಹುದಿನಗಳ ಕನಸಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೀಡಿದ್ದ ಭರವಸೆ ಈಡೇರಿಸುವ ಮೂಲಕ ಕೊನೆಭಾಗದ ರೈತರಲ್ಲಿ ಹೊಸ ಆಸೆ ಮೂಡಿಸಿ ನೀರಿನ ಚಿಂತೆ ದೂರು ಮಾಡಿದ್ದಾರೆ.ನೀರಾವರಿ ವ್ಯಾಪ್ತಿ: ತುಂಗಭದ್ರ ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ತಾಲೂಕಿನ ಬೂದುಗುಂಪಾ, ಹಾಲಸಮುದ್ರ, ತಿಮ್ಮಾಪುರ, ಉಳೇನೂರು, ಈಳಿಗನೂರು, ಯರಡೋಣಾ, ಯರಡೋಣಾ ಕ್ಯಾಂಪ್, ಕಕ್ಕರಗೋಳ, ಶಾಲಿಗನೂರು, ಬೆನ್ನೂರು, ಉಳೇನೂರು ಕ್ಯಾಂಪ್ ಸೇರಿದಂತೆ ಚೆನ್ನಳ್ಳಿ, ಸಿದ್ರಾಂಪುರ, ದೇವಿಕ್ಯಾಂಪ್, ಮುಕ್ಕುಂದಾ, ಸಿಂಗಾಪುರ ಗ್ರಾಮಗಳ ಕೊನೆ ಭಾಗಕ್ಕೆ ಕಾಲುವೆ ನೀರು ಸರಿಯಾಗಿ ತಲುಪುತ್ತಿರಿಲ್ಲ. ಹೀಗಾಗಿ ಪ್ರತಿ ವರ್ಷ ರೈತರು ಗುಂಪು ಗುಂಪಾಗಿ ತಮ್ಮ ಪಾಲಿನ ನೀರು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ, ಕಾಲುವೆ ಕ್ಟಸ್ಟ್ ಎತ್ತಿರುವ ಹೋರಾಟ ಮಾಡುತ್ತಿದ್ದರು. ರೈತರ ಜತೆಗೆ ನೀರು ಬಳಕೆದಾರರ ಸಂಘಗಳು ಸಹ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನೀರಾವರಿ ವ್ಯಾಪ್ತಿಯಯಲ್ಲಿಯೇ ನೀರಿನ `ವರಿ’ ಎಷ್ಟಿದೆ ಎನ್ನುವುದನ್ನು ತೋರಿಸುತ್ತಿದ್ದರು. ಮೇಲ್ಭಾಗದಲ್ಲಿ ಪ್ರಬಲ ನೀರುಗಳ್ಳತನ, ಅಕ್ರಮ ನೀರಾವರಿ ವ್ಯಾಪ್ತಿ ಹೆಚ್ಚಾಗುತ್ತಿದ್ದರಿಂದ ಅಸಲಿ ನೀರಾವರಿ ಭಾಗಕ್ಕೆ ನೀರು ತಲುಪುತ್ತಿರಿಲ್ಲ.
ಈ ರೈತರ ಸಮಸ್ಯೆಗೆ ಕೊನೆಗಾಣಿಸಲು ೭ ವರ್ಷಗಳಿಂದ ಅಂದು ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಶಿವರಾಜ ತಂಗಡಗಿ ನದಿ ನೀರು ಎತ್ತುವ ಮೂಲಕ ಕಾಲುವೆಗಳಿಗೆ ನೀರು ಬಿಟ್ಟು ರೈತರ ಜಮೀನಿಗೆ ಸರಳವಾಗಿ ನೀರು ತಲುಪಿಸುವ ಈ ಯೋಜನೆ ರೂಪಿಸಿದರು. ಈ ಯೋಜನೆ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಉಳೇನೂರು ಬಳಿ ತುಂಗಭದ್ರ ನದಿಗೆ ಜಾಕ್‌ವೆಲ್ ಅಳವಡಿಸಿ ನೀರು ಎತ್ತುವ ಮೂಲಕ ಪೈಪ್‌ಲೈನದಿಂದ ನೀರು ಸಾಗಿಸಿ ಕೊನೆ ೩೧/೭.೩೧/೮,೩೧/೧೦ ಸೇರಿದಂತೆ ಕೊನೆ ಭಾಗದ ಎಲ್ಲ ಉಪಕಾಲುವೆಗಳಿಗೆ ನೀರು ಬಿಟ್ಟರೆ ಸರಳವಾಗಿ ನೀರು ರೈತರ ಜಮೀನಿಗೆ ತಲುಪಿಸುವುದು ಯೋಜನೆ ಮಹತ್ವಾಕಾಂಕ್ಷಿ ಉದ್ದೇಶ. ಸುಮಾರು ೭ ವರ್ಷಗಳ ಬಳಿಕ ಸಚಿವ ಶಿವರಾಜ ತಂಗಡಗಿ ವಿಶೇಷ ಆಸಕ್ತಿ ವಹಿಸಿ ಈ ಯೋಜನೆ ಪೂರ್ಣಗೊಳಿಸಿದ್ದಾರೆ.ವ್ಯಾಪಕ ಮೆಚ್ಚುಗೆ:ಕೊನೆಭಾಗದ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ೨೧೧೮ರಲ್ಲಿ ಸಚಿವ ತಂಗಡಗಿ ಉಳೇನೂರು ಏತನೀರಾವರಿ ಯೋಜನೆ ಜಾರಿಗೆ ತಂದರು. ಆದರೆ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸ್ಗೂರು ವಿರುದ್ಧ ಪರಾಭವಗೊಂಡರು. ಶಾಸಕ ದಢೇಸ್ಗೂರು ಯೋಜನೆಗೆ ಚಾಲನೆ ನೀಡಿದರು. ಆದರೆ ಐದು ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳಲಿಲ್ಲ. ಸಚಿವ ತಂಗಡಗಿ ಪುನಃ೨೦೧೩ರಲ್ಲಿ ಶಾಸಕರಾಗಿ ಪುನರಾಯ್ಕೆಯಾದರು. ಬಳಿಕ ನನೆಗುದಿಗೆ ಇದ್ದ ಯೋಜನೆಗೆ ಹೆಚ್ಚುವರಿ ಅನುದಾನ ತರುವ ಮೂಲಕ ಏತನೀರಾವರಿ ಯೋಜನೆಗೆ ಪೂರ್ಣಗಳಿಸಿ ರೈತರ ನೀರಿನ`ವರಿ’ ದೂರ ಮಾಡಿದ್ದಾರೆ.
ಇಂದು ಲೋಕಾರ್ಪಣೆ: ಕೊನೆ ಭಾಗದ ರೈತರ ಕನಸಾಗಿದ್ದ ಉಳೇನೂರು ಏತನೀರಾವರಿ ಯೋಜನೆ ಸೆ. ೨೯ರಂದು ಸೋಮವಾರ ಲೋಕಾರ್ಪಣೆಯಾಗಲಿದೆ. ಸಚಿವ ತಂಗಡಗಿ ತಾಲೂಕಿನ ಯರಡೋಣಾ ಗ್ರಾಮದಲ್ಲಿ ಈ ಯೋಜನೆ ಉದ್ಘಾಟಿಸಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಕೊನೆ ಭಾಗದ ರೈತರು ಯೋಜನೆ ಪೂರ್ಣಗೊಳಿಸಿದ ಸಚಿವ ತಂಗಡಗಿ ಇವರಿಗೆ ಸನ್ಮಾನಿಸಿ ಗೌರವಿಸಲು ಪೂರ್ವಭಾವಿ ಸಭೆ ಸೇರಿ ಒಕ್ಕೂರಲಿನಿಂದ ತೀರ್ಮಾನಿಸಿದ್ದರು. ಈ ಎಲ್ಲ ಕಾರ್ಯಕ್ರಮ ಸೋಮವಾರ ನಡೆಯಲಿವೆ.