ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ನಿಯಮವನ್ನು ಜಾರಿಗೊಳಿಸಲು ಆಯಾ ತಾಲೂಕುಗಳ ತಹಸೀಲ್ದಾರರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಕ್ಷಣದ ಕ್ರಮ ಕೈಗೊಳ್ಳಲು ಸಮಿತಿ ರಚಿಸಿ, ವರದಿ ಪಡೆದು, ಸಕಾಲಿಕ ಕ್ರಮಗಳನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಹಾಗೂ ಸ್ಥಳೀಯ ವಿರೋಧಗಳ ನಡುವೆಯೂ ಕ್ವಾರಿಗಳನ್ನು ನಡೆಸುತ್ತಿರುವ, ನಿಯಮ ಮೀರಿ ಕ್ವಾರಿಗಳನ್ನು ನಿರ್ವಹಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಪೂರ್ವದಲ್ಲಿ ಆಯಾ ಇಲಾಖೆಯ ಭೂವಿಜ್ಞಾನಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ನೀಡಿದರು.ಸರ್ಕಾರಿ ಇಲಾಖೆಗಳ ಕಟ್ಟಡ ನಿರ್ಮಾಣ, ಕಾಮಗಾರಿಗಳಿಗಾಗಿ ಮೀಸಲಿರಿಸಲಾದ ಕ್ವಾರಿಗಳಲ್ಲಿ ಬಳಸಲಾದ ಮರಳಿನ ಪ್ರಮಾಣವನ್ನು ಗಮನಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂತಹ ಕ್ವಾರಿಗಳಲ್ಲಿ ಮರಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ಒಂದು ವೇಳೆ ಅಂತಹ ಪ್ರಮಾಣ ಎಸಗಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈವರೆಗೆ ಸರ್ಕಾರದ ಇಲಾಖೆಗಳಿಗೆ ಕಾಯ್ದಿರಿಸಿದ ಕ್ವಾರಿಗಳಿಂದ ಮರಳನ್ನು ಪಡೆದ ಇಲಾಖೆಗಳ ಅಧಿಕಾರಿಗಳು ಎಂ-ಸ್ಯಾಂಡ್ ಬಳಸಿರುವ ಹಾಗೂ ಬಳಸದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿ, ಮುಂದಿನ ದಿನಗಳಲ್ಲಿ ಕೋರಿಕೆಯ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಡಿಸಿ ಸಲಹೆ ನೀಡಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಅಬ್ಬಲಗೆರೆ ಗ್ರಾಮ ಹಾಗೂ ಹುಣಸೋಡು ಮತ್ತಿತರ ಸುತ್ತಮುತ್ತಲ ಗ್ರಾಮಗಳ ವಸತಿ ಯೋಜನೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಭೂಪರಿವರ್ತನೆ ಅಥವಾ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡದಂತೆ ಸ್ಥಳೀಯ ಜನಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.