ಕಾರ್ಯದಕ್ಷತೆ ಕುಗ್ಗಿಸಲು ಎಂಜಿನಿಯರ್‌ ಕವಿತಾ ಮೇಲೆ ಸಲ್ಲದ ಆರೋಪ

KannadaprabhaNewsNetwork |  
Published : Mar 04, 2026, 01:45 AM IST
3ಎಚ್ಎಸ್ಎನ್12 :  | Kannada Prabha

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ದಕ್ಷವಾಗಿ ಮುಂದೆ ನಿಂತು ನಗರದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪಾಲಿಕೆಯೊಳಗೆ ನಡೆಯುತ್ತಿರುವ ಕೆಲ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್‌ ಎಂಜಿನಿಯರ್‌ ಕವಿತಾ ಅವರ ಆತ್ಮಸ್ಥೈರ್ಯ ಕುಗ್ಗಿಸುವ ನಿಟ್ಟಿನಲ್ಲಿ ಕೆಲವರು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದಲ್ಲದೆ ಅದಕ್ಕೆ ಜಾತಿ ಬಣ್ಣ ಕಟ್ಟಲು ಹೊರಟಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಪ್ರಸ್ತೂತಿ ಸ್ತ್ರೀ ರೋಗ ತಜ್ಞೆ ಡಾ. ಸಾವಿತ್ರಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ದಕ್ಷವಾಗಿ ಮುಂದೆ ನಿಂತು ನಗರದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪಾಲಿಕೆಯೊಳಗೆ ನಡೆಯುತ್ತಿರುವ ಕೆಲ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್‌ ಎಂಜಿನಿಯರ್‌ ಕವಿತಾ ಅವರ ಆತ್ಮಸ್ಥೈರ್ಯ ಕುಗ್ಗಿಸುವ ನಿಟ್ಟಿನಲ್ಲಿ ಕೆಲವರು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದಲ್ಲದೆ ಅದಕ್ಕೆ ಜಾತಿ ಬಣ್ಣ ಕಟ್ಟಲು ಹೊರಟಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಪ್ರಸ್ತೂತಿ ಸ್ತ್ರೀ ರೋಗ ತಜ್ಞೆ ಡಾ. ಸಾವಿತ್ರಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಳೆದ ಹತ್ತು ಹದಿನೈದು ವರ್ಷಗಳಿಂದ ವಿವಿಧ ತಾಲೂಕುಗಳಲ್ಲಿ ಸೇವೆ ಸಲ್ಲಿಸಿರುವ ಅವರು ದಕ್ಷತೆ, ಕಟ್ಟುನಿಟ್ಟು ಹಾಗೂ ಪ್ರಾಮಾಣಿಕತೆಗಾಗಿ ಪರಿಚಿತರಾಗಿದ್ದಾರೆ. ಅಧಿಕಾರದ ಒತ್ತಡಗಳಿಗೂ ಮಣಿಯದೆ, ತಮ್ಮ ಪಾಡಿನ ಕೆಲಸವನ್ನು ನಿರ್ವಹಿಸಿದ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಕವಿತಾ ಗಳಿಸಿದ್ದಾರೆ. ಅರಕಲಗೂಡು, ಸಕಲೇಶಪುರ ಹಾಗೂ ಆಲೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅವರು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರೂ ಕಾರ್ಯಕ್ಷಮತೆಯಲ್ಲಿ ಹಿಂದೆ ಸರಿಯಲಿಲ್ಲ. ಭ್ರಷ್ಟಾಚಾರ ವಿರೋಧಿ ನಿಲುವು ತಾಳಿದ ಕಾರಣಕ್ಕೆ ಕೆಲ ವಲಯಗಳಿಂದ ವಿರೋಧ ಎದುರಿಸಿದ್ದರೆಂಬ ಮಾತುಗಳೂ ಕೇಳಿಬಂದಿವೆ. ಈಗ ಹಾಸನದಲ್ಲೂ ಅವರ ಕಾರ್ಯಶೈಲಿ ಕೆಲವರಿಗೆ ಅಸಮಾಧಾನ ಉಂಟುಮಾಡಿದೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ ಎಂದರು. ಇತ್ತೀಚೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಕೆಲವು ಆರೋಪಗಳು ಹೊರಬಿದ್ದಿದ್ದು, ಈ ಆರೋಪಗಳನ್ನು ಆಧಾರವಾಗಿಸಿಕೊಂಡು ವೈಯಕ್ತಿಕ ದ್ವೇಷದಿಂದ ವಿಷಯವನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನು ಕೆಲ ನಾಗರಿಕರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ವಕೀಲ ಕಿಶೋರ್‌ ಮಾತನಾಡಿ, ಒಬ್ಬ ಮಹಿಳಾ ಅಧಿಕಾರಿಯ ಕಾರ್ಯಕ್ಷಮತೆಯನ್ನು ಕುಗ್ಗಿಸಲು ಮತ್ತು ಅವರ ಮೇಲೆ ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡಲು ಕೆಲವರು ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಶಂಕೆಯೂ ಕೇಳಿಬರುತ್ತಿದೆ. ಆರೋಪಗಳಲ್ಲಿ ಸತ್ಯವಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದರಲ್ಲಿ ಯಾರಿಗೂ ಅಭ್ಯಂತರವಿಲ್ಲ. ಆದರೆ ಆಧಾರರಹಿತ ಆರೋಪಗಳ ಆಧಾರದ ಮೇಲೆ ಕ್ರಮ ಜರುಗಿಸಿದರೆ ಅದು ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಕುಗ್ಗಿಸುವುದಷ್ಟೇ ಅಲ್ಲ, ಭ್ರಷ್ಟ ವ್ಯವಸ್ಥೆಗೆ ಪರೋಕ್ಷವಾಗಿ ಉತ್ತೇಜನ ನೀಡುವಂತಾಗುತ್ತದೆ. ದಶಕಗಳಿಂದ ನಗರದಲ್ಲಿ ಬದುಕುತ್ತಿರುವ ನಾಗರಿಕರ ಪ್ರಕಾರ, ಇಲಾಖೆಗಳೊಳಗಿನ ಒಳಜಗಳ ಹಾಗೂ ಸ್ವಾರ್ಥದ ರಾಜಕಾರಣದ ಪರಿಣಾಮವಾಗಿ ಇಂತಹ ವಿವಾದಗಳು ಉಂಟಾಗುತ್ತವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದರು. ಹೀಗಾಗಿ, ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಯ ಮೂಲಕ ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು. ದಕ್ಷ ಅಧಿಕಾರಿಗಳಿಗೆ ನ್ಯಾಯ ಒದಗಿಸುವ ಜೊತೆಗೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವೈದ್ಯರಾದ ಡಾ. ಭಾರತಿ ರಾಜಶೇಖರ್‌, ಡಾ. ಧನಲಕ್ಷ್ಮಿ, ಸಮಾಜ ಸೇವಕಿ ಕೆ.ಟಿ. ಜಯಶ್ರೀ, ಕಲಾವತಿ ಮಧು ಸೂದನ್, ವಕೀಲರಾದ ಗಿರಿಜಾಂಬಿಕ, ಕಿಶೋರ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಸೇರಿದ ಜೆಡಿಎಸ್‌ ಕಾರ್ಯಕರ್ತರು
ಚಂದ್ರಗುತ್ತಿಯಲ್ಲಿ ವಿಜಯನಗರ ಅರಸರ ಕಾಲದ ವೀರಗಲ್ಲು ಪತ್ತೆ