ದೇಶದ, ಸಮಾಜದ ಬೆಳವಣಿಗೆಯ ನಿರ್ಮಾತೃಗಳು ಎನಿಸಿಕೊಂಡಿರುವ ಎಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾದರೂ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಎಂಜಿನಿಯರ್‌ಗಳು ಅಭಿವೃದ್ಧಿಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ದೇಶದ, ಸಮಾಜದ ಬೆಳವಣಿಗೆಯ ನಿರ್ಮಾತೃಗಳು ಎನಿಸಿಕೊಂಡಿರುವ ಎಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾದರೂ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಎಂಜಿನಿಯರ್‌ಗಳು ಅಭಿವೃದ್ಧಿಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ತುಮಕೂರು ಜಿಲ್ಲಾ ಸರ್ಕಾರಿ ಎಂಜಿನಿಯರ್‌ಗಳ ಸಂಘದ ಉದ್ಘಾಟನೆ ಹಾಗೂ ಸಂಘದ ಲಾಂಛನ ಅನಾವರಣ ಮಾಡಿ ಮಾತನಾಡಿದರು.ಉತ್ತರ ಕರ್ನಾಟಕದ ಭಾಗಕ್ಕಿಂತ ಮೈಸೂರು ಕರ್ನಾಟಕ ಅಭಿವೃದ್ಧಿಯಾಗಿರುವುದಕ್ಕೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಆಡಳಿತದಲ್ಲಿ ಎಂಜಿನಿಯರ್, ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಅಭಿವೃದ್ಧಿ ಚಿಂತನೆ, ಅವರು ಮಾಡಿದ ಕೆಲಸ ಕಾರಣ ಎಂದರು.ವಿಶ್ವೇಶ್ವರಯ್ಯನವರು ನಾಡಿನ ಅಭಿವೃದ್ಧಿ ಆಗಬೇಕು ಎಂದುಕೊಂಡು ಕಾರ್ಯನಿರ್ವಹಿಸಿದರು, ಕಾರ್ಯವ್ಯಾಪ್ತಿಯಲ್ಲಿ ಸ್ವಾರ್ಥತೆ ಬರಬಾರದು ಎಂಬ ತತ್ವ, ಆದರ್ಶಗಳನ್ನು ಇಟ್ಟುಕೊಂಡಿದ್ದರು. ತಮ್ಮಜೀವನಪೂರ್ತಿ ಅದೇ ತತ್ವದಡಿಯಲ್ಲಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು. ಈಗಿನ ಅನೇಕ ಎಂಜಿನಿಯರ್‌ಗಳು ವಿಶ್ವೇಶ್ವರಯ್ಯನವರ ಸ್ವಲ್ಪ ಪ್ರಮಾಣದ ತತ್ವವನ್ನು ಪಾಲನೆ ಮಾಡುವವರಿದ್ದಾರೆ. ಎಲ್ಲಾ ಎಂಜಿನಿಯರ್‌ಗಳು ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೆಲಸ ಮಾಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಬರಬಹುದು, ಬದಲಾಗಬಹುದು, ಆದರೆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕಾದವರು ಎಂಜಿನಿಯರ್‌ಗಳು. ಸರ್ಕಾರದ ಮಟ್ಟದಲ್ಲಿ ನಿಯಮ ರೂಪಿಸುವಾಗ ಲೋಪ ಕಂಡುಬಂದಲ್ಲಿ ಎಂಜಿನಿಯರ್‌ಗಳ ಸಂಘಗಳು ಚರ್ಚೆ ಮಾಡಿ ಸರಿಯಾದ ನಿಯಮ ರೂಪುಗೊಳ್ಳಲು ಸಲಹೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಸರ್ಕಾರದಿಂದ ಎ.ಐ. ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದ ಡಾ.ಪರಮೇಶ್ವರ್, ಮುಂದಿನ ವರ್ಷದಿಂದ ಸರ್ಕಾರದಿಂದಲೇ ಎಂಜಿನಿಯರ್ಸ್ ದಿನ ಆಚರಿಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲಾ ಕ್ಷೇತ್ರಗಳ ಎಂಜಿನಿಯರ್‌ಗಳ ಪಾತ್ರ ದೊಡ್ಡದಿದೆ. ಹೊಸ ಆವಿಷ್ಕಾರ, ಮೂಲಸೌಕರ್ಯ ಒದಗಿಸುವಲ್ಲಿ ಎಂಜಿನಿಯರ್‌ಗಳು ಕೊಡುಗೆ ನೀಡಿದ್ದಾರೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ಎಂಜಿನಿಯರ್‌ಗಳು ವಿವಿಧ ರೀತಿಯ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಏನೇ ಆದರೂ ಎಂಜಿನಿಯರ್‌ಗಳು ತಮ್ಮಆತ್ಮಸಾಕ್ಷಿಯಂತೆ ಕೆಲಸ ಮಾಡುವ ಪ್ರಯತ್ನ ಮಾಡಿರಿ ಎಂದು ಹೇಳಿದರು. ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ನಗರಪಾಲಿಕೆಆಯುಕ್ತೆ ಶುಭಾ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ರಾಘವನ್, ಪ್ರಧಾನ ಎಂಜಿನಿಯರ್ ಬಿ.ಆರ್. ವೀರಭದ್ರಯ್ಯ, ಟಿ.ಎನ್. ಫಣಿರಾಜ್, ಎಚ್.ಕೆ.ದಿವಾಕರ್ ನಾಯಕ್, ಎಚ್.ಶಿವಕುಮಾರ್, ಮುಖ್ಯಇಂಜಿನಿಯರ್ ಎಚ್.ಎಸ್. ಆನಂದ್, ಅಧೀಕ್ಷಕ ಎಂಜಿನಿಯರ್‌ಗಳಾದ ಜಿ.ಸಿ.ಜಗದೀಶ್, ಬಿ.ತಿಮ್ಮರಾಯಪ್ಪ ಭಾಗವಹಿಸಿದ್ದರು.ಜಿಲ್ಲಾ ಸರ್ಕಾರಿ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಎಚ್.ಆರ್. ಮುರಳಿಧರ, ಉಪಾಧ್ಯಕ್ಷ ಜಿ. ರಾಜು, ಕಾರ್ಯದರ್ಶಿ ಎಚ್.ಎಂ.ಪುಷ್ಯಂತ್, ಖಜಾಂಚಿ ಎಚ್.ಎಸ್. ಪ್ರಸನ್ನಕುಮಾರ್, ನಿರ್ದೇಶಕರಾದ ಅಂಜನ್, ಕೆ. ಮಂಜು ಕಿರಣ ಯಾದವ್, ಎಸ್. ಛಾಯಾಮಣಿ, ಜಿ.ಎನ್. ರಾಧಾಕೃಷ್ಣ, ಬಿ.ಎನ್. ಸುರೇಶ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.