ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ವಿವಿಧ ಗ್ರಾಮಗಳ ಮೂಲಕ ಹೇಮಾವತಿ ನದಿ ನಾಲೆ ಏರಿ ಮೇಲೆ ಹೇಮಾವತಿ ಜಲಾಶಯ ಯೋಜನೆ ಚನ್ನರಾಯಪಟ್ಟಣ ವಿಭಾಗದ ಅಧೀಕ್ಷಕ ಎಂಜಿನಿಯರ್ ಎಂ.ಎನ್ ಕಿಶೋರ್ ಜೊತೆ ಶಾಸಕರು ಸಂಚರಿಸಿ ಪರಿಶೀಲನೆ ನಡೆಸಿದರು.
ತಾಲೂಕಿನ ಬೊಮ್ಮೇನಹಳ್ಳಿ, ಬೂಕನಕೆರೆ, ಮತ್ತೀಕೆರೆ, ಯಗಚಗುಪ್ಪೆ, ಹೊಸ ಮಾವಿನಕೆರೆ ಮುಂತಾದೆಡೆ ಹೇಮಾವತಿ ನಾಲೆ ಏರಿಯ ಮೇಲೆ ಸಂಚರಿಸಿದ ವೇಳೆ ಕೊನೇ ಭಾಗಕ್ಕೆ ಇದುವರೆಗೂ ನೀರು ಹರಿಯದಿರುವ ಬಗ್ಗೆ ರೈತರ ದೂರುಗಳನ್ನು ಆಲಿಸಿ ಎಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡರು.ನಾಲಾ ಬಯಲಿನಲ್ಲಿ ನಾಲೆ ಅವ್ಯವಸ್ಥೆ ಮತ್ತು ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡ ಶಾಸಕರು ಆನಂತರ ಪಟ್ಟಣದ ಎಚ್ಎಲ್‌ಬಿಸಿ ನಂ.03 ಉಪ ವಿಭಾಗದಲ್ಲಿ ಎಂಜಿನಿಯರುಗಳ ಸಭೆ ನಡೆಸಿ ಅವರ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.
ಹರಿಯುತ್ತಿರುವ ನಾಲೆ ನೀರಿನಲ್ಲಿಯೇ ಜೆಸಿಬಿ ಯಂತ್ರಗಳ ಮೂಲಕ ನೀರು ಕಲಕಿ ರಾಡಿ ಎಬ್ಬಿಸುವ ಮೂಲಕ ಹೂಳೆತ್ತುವ ನಾಟಕ ಮಾಡಲಾಗಿದೆ. ಕೆಲವು ಕಡೆ ತೆಗೆದ ಹೂಳನ್ನು ನಾಲೆ ಏರಿ ಮೇಲೆ ಹಾಕಿ ರೈತರು ತಿರುಗಾಟಕ್ಕೆ ತೊಂದರೆ ಪಡಿಸಲಾಗಿದೆ. ಎತ್ತಿದ ಹೂಳು ಮತ್ತೆ ಕಾಲುವೆಗೆ ಬೀಳುವಂತೆ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ನಾಲೆಯಲ್ಲಿ ಶಿಲ್ಟ್ ಮತ್ತು ಜಂಗಲ್ ತೆಗೆಸಿ ರೈತರಿಗೆ ನೀರು ಕೊಡದಿದ್ದರೆ ನಾನು ಶಾಸಕ ಎನ್ನುವುದನ್ನು ಮರೆತು ರೈತರೊಂದಿಗೆ ಕಚೇರಿ ಎದುರು ಮಲಗುತ್ತೇನೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆಯಿದೆ. ಇಲ್ಲಿನ ಅನೇಕ ನೌಕರರನ್ನು ರಾಜ್ಯ ಸರ್ಕಾರ ಡೆಪ್ಯೂಟೇಷನ್ ಮಾಡಿ ಬೇರೆ ಕಡೆ ನಿಯೋಜಿಸಿದೆ. ಅಗತ್ಯ ಸಿಬ್ಬಂದಿಯಿಲ್ಲದೆ ನಾವು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ ಎಂದು ಕೆಲವು ಎಂಜಿನಿಯರ್‌ಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಹಳೆಯ ತೂಬುಗಳನ್ನು ಸರಿಪಡಿಸಿ:
ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಇಲಾಖೆ ಎಂಜಿನಿಯರ್‌ಗಳು ಮಾತ್ರ ಅಗತ್ಯ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ನಾಲೆಯಲ್ಲಿ ಮುಳುಗಿ ರೈತರು ಸಾಯುವ ಮುನ್ನ ಹಾಳಾಗಿರುವ ತೂಬುಗಳನ್ನು ಸರಿಪಡಿಸುವಂತೆ ಶಾಸಕರು ಸೂಚಿಸಿದರು.
ಅಧೀಕ್ಷಕ ಎಂಜಿನಿಯರ್ ಸ್ಥಳಕ್ಕೆ ಬಂದಿದ್ದರೂ ಕೆಲವು ಎಂಜಿನಿಯರ್‌ಗಳು ಸ್ಥಳಕೆ ಬರಲಿಲ್ಲ. ಸ್ವತ: ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಮೊಬೈಲ್ ಕರೆ ಮಾಡಿದರೂ ಕರೆ ಸ್ವೀಕರಿಸದೆ ಕಟ್ ಮಾಡುತ್ತಿದ್ದರು. ಇದರಿಂದ ಶಾಸಕರು ಆಕ್ರೋಶಗೊಂಡರು.
ತಕ್ಷಣ ಕಾವೇರಿ ನೀರಾವರಿ ನಿಗಮದ ಎಂ.ಡಿ. ಜೊತೆ ದೂರವಾಣಿ ಮೂಲಕ ಮಾತನಾಡಿ, ಅಧೀಕ್ಷಕ ಎಂಜಿನಿಯರ್ ಕರೆ ಮಾಡಿದರೂ ಸ್ವೀಕರಿಸದೆ ಅಸಡ್ಡೆ ಮಾಡುತ್ತಿರುವ ಎಂಜಿನಿಯರ್‌ಗಳ ವಿರುದ್ಧ ಪೆನ್ ಬಳಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಸಭೆಯಲ್ಲಿ ಹೇಮಾವತಿ ಜಲಾಶಯ ಯೋಜನೆ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್, ಎಚ್.ಎಲ್.ಬಿ.ಸಿ ನಂ.03 ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ್, ಎಚ್.ಎಲ್.ಬಿ.ಸಿ ನಂ.20 ವಿಭಾಗದ ಸಹಾಯಕ ಕಾರ್ಯಪಾಕ ಎಂಜಿನಿಯರ್ ವಿಶ್ವನಾಥ್, ಬೂಕನಕೆರೆ ವಿಭಾಗದ ಸಹಾಯಕ ಕಾರ್ಯಪಾಕ ಎಂಜಿನಿಯರ್ ಸುಧಾ, ಆನಂದ ನಾಯಕ್, ಮಹೇಶ್, ರಾಘವೇಂದ್ರ ಸೇರಿದಂತೆ ಹಲವರು ಇದ್ದರು.