ಕಂಪ್ಲಿಯಲ್ಲಿ ಆಂಗ್ಲ ನಾಮಫಲಕ, ಹೋರ್ಡಿಂಗ್ ಹಾವಳಿ

KannadaprabhaNewsNetwork |  
Published : Jan 05, 2024, 01:45 AM IST
ಕಂಪ್ಲಿಯಲ್ಲಿ ಅಳವಡಿಸಲಾದ ಕನ್ನಡೇತರ ಭಾಷೆಯಲ್ಲಿನ ನಾಮ ಫಲಕಗಳ ನಿಶಾನೆಗಳು (ಬ್ಯಾನರ್) | Kannada Prabha

ಸಾರಾಂಶ

ಸರ್ಕಾರದ ಈ ಆದೇಶ ಬರೀ ಬೆಂಗಳೂರಿಗೆ ಸೀಮಿತವೆಂದು ಭಾವಿಸಲಾಗಿದೆಯೇ ಎಂದು ಸ್ಥಳೀಯ ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕಂಪ್ಲಿ: ಪಟ್ಟಣದ ಎಲ್ಲೆಡೆ ಆಂಗ್ಲ ನಾಮಫಲಕಗಳು, ಹೋರ್ಡಿಂಗ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ. ನಿಯಮ ಪಾಲಿಸದವರ ವಿರುದ್ಧ ಕನ್ನಡಪರ ಸಂಘಟನೆಗಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಮಫಲಕಗಳು, ಬೋರ್ಡ್‌ಗಳಲ್ಲಿ ಶೇ. 60ರಷ್ಟು ಕನ್ನಡ ಬಳಸಬೇಕು ಎಂಬುದು ಸರ್ಕಾರದ ನಿಯಮ. ಈ ನಿಯಮ ಪಾಲಿಸದ ಉದ್ಯಮಗಳು, ಅಂಗಡಿಗಳ ವಿರುದ್ಧ ಈಗ ರಾಜ್ಯಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳ ಹೋರಾಟ ನಡೆಸುತ್ತಿವೆ.

ಸರ್ಕಾರದ ಈ ಆದೇಶ ಬರೀ ಬೆಂಗಳೂರಿಗೆ ಸೀಮಿತವೆಂದು ಭಾವಿಸಲಾಗಿದೆಯೇ ಎಂದು ಸ್ಥಳೀಯ ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಎಷ್ಟೋ ನಾಮಫಲಕಗಳನ್ನು ಕನ್ನಡೇತರ ಭಾಷೆಗಳಲ್ಲಿ ಅಳವಡಿಸಲಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೋರಾಟಗಾರರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕೂಡಲೇ ಈ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರರು ಒತ್ತಾಯಿಸಿದ್ದಾರೆ.ಮನವಿಗೆ ಸೀಮಿತವಾಯ್ತ: ಕನ್ನಡ ಭಾಷೆಯಲ್ಲಿರುವ ನಾಮಫಲಕ ಅಳವಡಿಸುವಂತೆ ಹಿಂದೆ ಅನೇಕ ಬಾರಿ ಕನ್ನಡಪರ ಸಂಘಟನೆಗಳ ಮುಖಂಡರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಈ ಹಿಂದೆ ನವ ಕರ್ನಾಟಕ ಯುವ ಶಕ್ತಿ ಸಂಘದಿಂದ ಪಟ್ಟಣದ ವಿವಿಧೆಡೆ ಅಳವಡಿಸಲಾಗಿದ್ದ ಕನ್ನಡೇತರ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಹೋರಾಟ ನಡೆಸಿದ್ದರು. ಆದರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಅನ್ಯಭಾಷೆಯ ನಾಮಫಲಕ, ಬ್ಯಾನರ್ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಕನ್ನಡಪರ ಸಂಘಟನೆಗಳ ಮುಖಂಡರ ಒತ್ತಾಸೆಯಾಗಿದೆ. ಕ್ರಮ ಕೈಗೊಳ್ಳಲಿ: ಪಟ್ಟಣದ ಎಲ್ಲೆಡೆ ಆಂಗ್ಲ ನಾಮಫಲಕಗಳು ಹಾಗೂ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಕಾರದ ಆದೇಶದಂತೆ ಫೆ. 28ರ ಒಳಗಾಗಿ ಈ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು. ಗಡುವಿನ ಬಳಿಕವು ಪಟ್ಟಣದಲ್ಲಿ ಕನ್ನಡೇತರ ಭಾಷೆಯಲ್ಲಿನ ನಾಮಫಲಕಗಳು ಅಥವಾ ಬ್ಯಾನರ್ ಕಂಡುಬಂದಲ್ಲಿ ಉಗ್ರ ಹೋರಾಟ ನಡೆಸಿ, ಶೇ. 60ರಷ್ಟು ಕನ್ನಡ ಬಳಕೆ ಇಲ್ಲದ ನಾಮಫಲಕಗಳನ್ನು ಸುಟ್ಟುಹಾಕಲಾಗುವುದು ಎಂದು ಕರವೇ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿನಿಯರಿಬ್ಬರು ನದಿಯಲ್ಲಿಮುಳುಗಿ ಸಾವು, ಒಬ್ಬಾಕೆ ಅಸ್ವಸ್ಥ
ಸರಣಿ ಬಾಂಬ್‌ ಸ್ಫೋಟ: 7 ಮಂದಿಗೆ 7 ವರ್ಷ ಜೈಲು