ನರಕ ಸಾಕಾಗಿದೆ, ಕಾನೂನಡಿ ದಯಾಮರಣ ನೀಡಿ

KannadaprabhaNewsNetwork |  
Published : Jan 20, 2026, 01:30 AM IST
 19ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಗೌರವಯುತವಾಗಿ ಬದುಕುವ ಹಕ್ಕಿನಂತೆಯೇ ಅಸಹನೀಯ ವೇದನೆಯಿಂದ ಮುಕ್ತಿ ಪಡೆಯುವ ಮರಣ ಹಕ್ಕು ಮನುಷ್ಯನಿಗೆ ಬೇಕಾಗಿದೆ. ಆದರೂ ಸಹ ದಯಾಮರಣ ಕಾನೂನು ಪ್ರಕ್ರಿಯೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ, ಜಾಗೃತಿ ಮೂಡಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

- ಕಾನೂನು ಜಾರಿಗೆ ಬಂದು ವರ್ಷಗಳಾದರೂ ಪ್ರಯೋಜನವಿಲ್ಲ: ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ಅಸಮಾಧಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೌರವಯುತವಾಗಿ ಬದುಕುವ ಹಕ್ಕಿನಂತೆಯೇ ಅಸಹನೀಯ ವೇದನೆಯಿಂದ ಮುಕ್ತಿ ಪಡೆಯುವ ಮರಣ ಹಕ್ಕು ಮನುಷ್ಯನಿಗೆ ಬೇಕಾಗಿದೆ. ಆದರೂ ಸಹ ದಯಾಮರಣ ಕಾನೂನು ಪ್ರಕ್ರಿಯೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ, ಜಾಗೃತಿ ಮೂಡಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ದಯಾಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ, ರಾಷ್ಟ್ರದಲ್ಲಿ ದಯಾಮರಣ ಕಾನೂನು ಜಾರಿಗಾಗಿ ಕಳೆದ ಎರಡೂವರೆ ದಶಕಗಳಿಂದಲೂ ತಾವು ಹೋರಾಟ ನಡೆಸುತ್ತಿದ್ದೇವೆ. ದಯಾಮರಣ ಕಾನೂನು ಜಾರಿಗೆ ಬಂದು ಅನೇಕ ವರ್ಷಗಳೇ ಆಗಿವೆ. ಆದರೆ, ಸರ್ಕಾರ ಮಾತ್ರ ಕಾನೂನಿನ ಮಾರ್ಗಸೂಚಿ ನಿರ್ಧರಿಸುವಲ್ಲಿ ಹಿಂದೇಟು ಹಾಕುತ್ತಿವೆ ಎಂದರು.

ಬಡವರಿಗೆ ನರಕಯಾತನೆ:

ಹಣ ಬಲ, ಜನಬಲ ಇಲ್ಲದ ಸಾವಿರಾರು ಬಡ ವಯೋವೃದ್ಧರು ಹಲವಾರು ರೋಗ ರುಜಿನಗಳಿಗೆ ತುತ್ತಾಗಿ, ಸಾಯಲೂ ಆಗದೇ, ಬದುಕಲೂ ಆಗದೆ ಜೀವ ಸವೆಸುತ್ತಿದ್ದಾರೆ. ಇರುವಲ್ಲಿಯೇ ನರಳುತ್ತಾ, ಮಲ-ಮೂತ್ರ ಮಾಡಿಕೊಂಡು, ದಿನ ಕಳೆಯುತ್ತ, ಸಾವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹವರ ಪರವಾಗಿ ಸರ್ಕಾರ ಮೊದಲು ಗಮನಹರಿಸಿ, ಗೌರವಯುವ ಸಾವು ದಯಪಾಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಜನರಿಗೆ ಗೊಂದಲ:

ಬಡವರ ದೇಗುಲವೆಂದೇ ಕರೆಯಲಾಗುವ ಸರ್ಕಾರಿ ಆಸ್ಪತ್ರೆಗಳಲ್ಲೇ ದಯಾಮರಣ ಪ್ರಕ್ರಿಯೆ ನಡೆಯಬೇಕು. ಆದರೆ, ದಯಾ ಮರಣಕ್ಕಾಗಿ ಎಲ್ಲಿ ಅರ್ಜಿ ಹಾಕಬೇಕು, ಯಾವ ಆಸ್ಪತ್ರೆ ಸಂಪರ್ಕಿಸಬೇಕು ಎಂಬ ಬಗ್ಗೆ ಜನರಿಗೆ ಗೊಂದಲ ಇದೆ. ದಯಾಮರಣ ಕಾನೂನು ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಸಾವಿರಾರು ವಯೋವೃದ್ಧರು ನರಳಾಟ ಸಹಿಸಲಾಗದೇ ಹಿಡಿಶಾಪ ಹಾಕುವಂತಾಗಿದೆ. ತಮಗೆ ದಯಾ ಮರಣ ನೀಡುವಂತೆ ಒತ್ತಾಯಿಸುತ್ತಲೇ ಇಹಲೋಕ ತೊರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರೋಗಗಳಿಂದ ನರಳುತ್ತಿದ್ದೇನೆ:

ನೊಂದವರ ಶಾಪಕ್ಕೆ ಸರ್ಕಾರ ಗುರಿಯಾಗದೇ, ದಯಾ ಮರಣದ ಕಾನೂನುಗಳ ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ನನಗೆ ಈಗ 86 ವರ್ಷ. ಅನೇಕ ರೋಗಗಳಿಂದ ನಾನು ನರಳುತ್ತಿದ್ದೇನೆ. ನಿತ್ಯವೂ ದೇಹವನ್ನು ರಿಪೇರಿ ಮಾಡಿಕೊಂಡು, ಜೀವನ ನಡೆಸುವುದು ನನಗೆ ಬೇಡವಾಗಿದೆ. ರೋಗಗಳು ಉಲ್ಭಣಿಸಿ, ಪರಾವಲಂಬಿಯಾಗಿ, ಬದುಕುವ ಮುನ್ನವೇ ದೇಹದಲ್ಲಿ ಅಲ್ಪಸ್ವಲ್ಪ ಶಕ್ತಿ ಇದ್ದಾಗಲೇ ಕಾನೂನಾತ್ಮಕವಾಗಿಯೇ ಸಾವನ್ನು ಬಯಸುತ್ತಿದ್ದೇವೆ ಎಂದು ಕರಿಬಸಮ್ಮ ತಿಳಿಸಿದರು.

ಈಗಾಗಲೇ ನನ್ನ ಕಾಯಿಲೆಗಳ ಬಗ್ಗೆ ವೈದ್ಯರು ನೀಡಿರುವ ವರದಿಗಳನ್ನು ಜಿಲ್ಲಾ ಆಡಳಿತ, ಸ್ಥಳೀಯ ನ್ಯಾಯಾಲಯ, ರಾಜ್ಯಪಾಲರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ದಯಾ ಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದೇನೆ. ನನ್ನ ದೇಹ ಮತ್ತು ಕಣ್ಣುಗಳನ್ನು ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದೇನೆ. ದೇಹವು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲೆಂಬ ಸದುದ್ದೇಶ ನನ್ನದು. ಹಾಗಾಗಿ, ಕಾನೂನಾತ್ಮಕವಾಗಿ ಮರಣ ಹೊಂದಿದ ನಂತರ ಈ ಪ್ರಕ್ರಿಯೆ ನೆರವೇರಿಸಿಕೊಡಬೇಕು ಎಂದು ಎಚ್.ಬಿ. ಕರಿಬಸಮ್ಮ ಸರ್ಕಾರಕ್ಕೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮಂಜುಳಾ ಬಸವಲಿಂಗಪ್ಪ, ಪ್ರಭಾ ರವೀಂದ್ರ, ಶಹನಾಜ್, ವೆಂಕಟೇಶ, ಶಾಂತಮ್ಮ, ವಿಜಯಕುಮಾರಿ, ಗಿರಿಜಮ್ಮ, ರೇಖಾ ಇತರರು ಇದ್ದರು.

- - -

(ಬಾಕ್ಸ್‌) * ಅನುಮತಿ ಕೊಡದಿದ್ದರೆ ಆತ್ಮಹತ್ಯೆ ಬೆದರಿಕೆ! ನನಗೆ 86 ವರ್ಷ. ಅನೇಕ ರೋಗಗಳಿಂದ ನರಳುತ್ತಿದ್ದೇನೆ. ಒಂದುವೇಳೆ ದಯಾ ಮರಣಕ್ಕೆ ಸರ್ಕಾರ ಅನುಮತಿ ನೀಡದಿದ್ದರೆ, ನಾನು ಕೋಟ್ಯಾನುಕೋಟಿ ವಯೋವೃದ್ಧರ ಪರವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಇದು ಆತ್ಮಹತ್ಯೆ ಆಗೋದಿಲ್ಲ. ಇದನ್ನು ಮರ್ಯಾದೆಯ ಸಾವು ಎಂಬುದಾಗಿಯೇ ಪರಿಗಣಿಸಬೇಕು. ನನ್ನ ಈ ನಿರ್ಧಾರಕ್ಕೆ ಸರ್ಕಾರವೇ ನೇರ ಹೊಣೆ ಆಗಬೇಕಾಗುತ್ತದೆ. ಜಾರಿಯಾಗಿರುವ ದಯಾ ಮರಣ ಕಾನೂನಿಗೆ ಮೊದಲನೆಯವಳಾಗಿ ಆತ್ಮಸಂತೋಷದಿಂದ ಒಳಗಾಗಲು ನಾನು ಬಯಸುತ್ತೇನೆ. ನನಗೆ ಸರ್ಕಾರ ಮುಕ್ತಮಾರ್ಗ ತೋರಿಸಲಿ.

- ಎಚ್.ಬಿ.ಕರಿಬಸಮ್ಮ, ದಯಾ ಮರಣ ಹೋರಾಟಗಾರ್ತಿ.

- - -

-19ಕೆಡಿವಿಜಿ1:

ದಾವಣಗೆರೆಯಲ್ಲಿ ಸೋಮವಾರ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾನೂನಿನಡಿ ದಯಾಮರಣ ನೀಡಲು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ