ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೆಟ್ಟಿಲೇರಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೆಟ್ಟಿಲೇರಿದೆ.
ಈ ಕುರಿತು ಪ್ರಕರಣದ ತನಿಖೆ ನಡೆಸಿರುವ ನಗರದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಆರೋಪಿಗಳಾದ ಪವಿತ್ರಾಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಈ ಮೂವರು ಆರೋಪಿಗಳು ಸಲ್ಲಿಸಿದ ಮನವಿ ಆಧರಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ 2026ರ ಜ.12ರಂದು ನಿರ್ದೇಶಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.ಈ ಮೂವರು ಆರೋಪಿಗಳ ಮೌಖಿಕ ಹೇಳಿಕೆ/ಮನವಿ ಆಧರಿಸಿ ಜೈಲು ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಅಥವಾ ಆಕ್ಷೇಪಣೆ ಸ್ವೀಕರಿಸದೆ ಮನೆಯಿಂದ ಊಟ ತರಿಸಿಕೊಳ್ಳಲು ಅನಮತಿಸುವಂತೆ ಅಧೀನ ನ್ಯಾಯಾಲಯವು ಆದೇಶ ಹೊರಡಿಸಿರುವುದು ಅಕ್ರಮ ಹಾಗೂ ಏಕಪಕ್ಷೀಯವಾಗಿದೆ. ಈ ಮೂವರು ಆರೋಪಿಗಳಿಗೆ ಮನೆಯಿಂದ ಊಟ ತಿರಿಸಿಕೊಳ್ಳಲು ಅನುಮತಿಸಿದರೆ, ಜೈಲಿನ ಇತರೆ ಕೈದಿಗಳು ಸಹ ಅದೇ ಮನವಿ ಮಾಡಲಿದ್ದಾರೆ. ಇದು ಜೈಲಿನ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಈ ಆದೇಶ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥದವರೆಗೆ ಅಧೀನ ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.ಜೈಲು ಅಧಿಕಾರಿಗಳ ಆಕ್ಷೇಪವೇನು?:
ಜೈಲು ಆಹಾರ ಗುಣಮಟ್ಟದ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್‌ಎಐ) ಪ್ರಾಧಿಕಾರ ನಾಲ್ಕು ಸ್ಟಾರ್‌ನ ಸರ್ಟಿಫಿಕೇಟ್ ನೀಡಿದೆ. ಜೈಲಿನಲ್ಲಿ ಪೂರೈಸುತ್ತಿರುವ ಆಹಾರದ ತಯಾರಿಕೆ ಹಾಗೂ ಗುಣಮಟ್ಟವನ್ನು ಕಾರಾಗೃಹದ ಮುಖ್ಯ ಅಧೀಕ್ಷಕರು ಅಥವಾ ಅಧೀಕ್ಷಕರು, ವೈದ್ಯಾಧಿಕಾರಿಗಳು ಪರಿಶೀಲಿಸುತ್ತಾರೆ. ನಂತರವೇ ಆಹಾರವನ್ನು ಕೈದಿಗಳಿಗೆ ಪೂರೈಸಲಾಗುತ್ತದೆ. ವೈದ್ಯಾಧಿಕಾರಿಗಳ ಶಿಫಾರಸು ಇಲ್ಲದೆ ಯಾವುದೇ ಕೈದಿಗೂ ಮನೆಯಿಂದ ಊಟ ತರಿಸಿಕೊಳ್ಳಲು ರಿಯಾಯ್ತಿ ನೀಡಲು ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.ಅಲ್ಲದೆ, ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂದು ಯಾವೊಬ್ಬ ಆರೋಪಿಯೂ ಜೈಲು ಅಧಿಕಾರಿಗಳಿಗೆ ದೂರು ನೀಡಿಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದಾದರೆ, ಆರೋಪಿಗಳು ದೂರು ನೀಡಬಹುದಾಗಿದೆ. ಹೀಗಿದ್ದರೂ ಕೇವಲ ಆರೋಪಿಗಳ ಮೌಖಿಕ ಮನವಿ ಆಧರಿಸಿ ನ್ಯಾಯಾಲಯ ವಾರಕೊಮ್ಮೆ ಆರೋಪಿಗಳಿಗೆ ಮನೆ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಆದೇಶಿಸಿರುವುದು ಸಮರ್ಥನೀಯವಲ್ಲ. ಜೈಲಿನಲ್ಲಿರುವ ಪ್ರಕರಣದ ಆರೋಪಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆರೋಪಿಗಳಿಗೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.