ಪೊಲೀಸ್‌ ವಶದಲ್ಲೂ ಪವಿತ್ರಾಗೌಡ ಮೇಕಪ್‌, ಲಿಪ್‌ಸ್ಟಿಕ್‌!

| Published : Jun 26 2024, 12:39 AM IST

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪ್ರಿಯತಮೆ ಪವಿತ್ರಾಗೌಡ ತಮ್ಮ ವಶದಲ್ಲಿದ್ದಾಗ ಆಕೆಗೆ ಸೌಂದರ್ಯವರ್ಧಕಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎಂದು ಮಹಿಳಾ ಪೊಲೀಸರ ಮೇಲೆ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪ್ರಿಯತಮೆ ಪವಿತ್ರಾಗೌಡ ತಮ್ಮ ವಶದಲ್ಲಿದ್ದಾಗ ಆಕೆಗೆ ಸೌಂದರ್ಯವರ್ಧಕಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎಂದು ಮಹಿಳಾ ಪೊಲೀಸರ ಮೇಲೆ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಪವಿತ್ರಾಗೌಡಳ ಭದ್ರತಾ ಉಸ್ತುವಾರಿ ಹೊತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಅವರಿಗೆ ವಿವರಣೆ ಕೇಳಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ಮೆಮೋ ಕೊಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡಳನ್ನು ಬಂಧಿಸಿದ್ದ ಪೊಲೀಸರು, ತನಿಖೆ ಸಲುವಾಗಿ ಆಕೆಯನ್ನು 10 ದಿನ ಕಸ್ಟಡಿಗೆ ಪಡೆದಿದ್ದರು. ಆ ವೇಳೆ ಆಕೆ ತುಟಿಗಳಿಗೆ ಲಿಪ್‌ಸ್ಟಿಕ್‌ ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದಳು. ಪವಿತ್ರಾ ತುಟಿಗಳಿಗೆ ಲಿಪ್‌ಸ್ಟಿಕ್‌ ಹಾಕಿಕೊಂಡಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದವು. ಈ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಗಿರೀಶ್ ಅವರು, ಕಸ್ಟಡಿಯಲ್ಲಿದ್ದಾಗ ಕೊಲೆ ಪ್ರಕರಣದ ಆರೋಪಿಗೆ ಲಿಪ್‌ಸ್ಟಿಕ್‌ ಸೇರಿ ಸೌಂದರ್ಯವರ್ಧಕ ಬಳಸಲು ಅವಕಾಶ ಕೊಟ್ಟಿದ್ದು ಹೇಗೆ ಎಂಬ ಕುರಿತು ವಿವರಣೆ ನೀಡುವಂತೆ ಪಿಎಸ್‌ಐಗೆ ಮೆಮೋ ಕೊಟ್ಟಿದ್ದಾರೆ. ಆದರೆ ಇದುವರೆಗೆ ಮೆಮೋಗೆ ಪಿಎಸ್ಐ ಉತ್ತರ ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.

ಬಟ್ಟೆ ಬದಲಾಯಿಸುವಾಗ ಲಿಪ್‌ಸ್ಟಿಕ್‌:

ಪೊಲೀಸರ ಕಸ್ಟಡಿ ವೇಳೆ ರಾತ್ರಿ ಸಮಯದಲ್ಲಿ ಪವಿತ್ರಾಗೌಡಳನ್ನು ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಅಲ್ಲಿ ಆಕೆಗೆ ಅವರ ಕುಟುಂಬದವರು ಬಟ್ಟೆ ಜತೆ ಲಿಪ್‌ಸ್ಟಿಕ್‌ ಸೇರಿ ಸೌಂದರ್ಯವರ್ಧಕ ತಂದು ಕೊಟ್ಟಿರಬಹುದು. ಬಟ್ಟೆ ಬದಲಾಯಿಸುವ ವೇಳೆ ಆಕೆ ಲಿಪ್‌ಸ್ಟಿಕ್ ಹಾಕಿಕೊಂಡು ಠಾಣೆಗೆ ವಿಚಾರಣೆಗೆ ಬಂದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ ಕೊಲೆ ಪ್ರಕರಣದ ಮಹಜರ್‌ಗೆ ಪವಿತ್ರಾಗೌಡಳನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆಗ ರೆಸ್ಟ್ ರೂಂಗೆ ಹೋಗುವುದಾಗಿ ಹೇಳಿ ಮಲಗುವ ಕೋಣೆಗೆ ಹೋಗಿದ್ದಾಗ ಮುಖ ತೊಳೆದು ಲಿಪ್‌ಸ್ಟಿಕ್ ಹಾಕಿಕೊಂಡಿರಬಹುದು. ಹೀಗಾಗಿ ಆಕೆ ಯಾವ ಸಂದರ್ಭದಲ್ಲಿ ಲಿಪ್‌ಸ್ಟಿಕ್‌ ಹಾಕಿಕೊಂಡಿದ್ದಳು ಎಂಬುದು ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.