ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಇಬ್ಬರೂ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೈ ಶಂಕರ್ ಅವರು ಸೋಮವಾರ ಆದೇಶಿಸಿದ್ದಾರೆ.
ಜೊತೆಗೆ, ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ದರ್ಶನ್ ಕಾರು ಚಾಲಕ ಲಕ್ಷ್ಮಣ್ (ಆರೋಪಿ-12) ಹಾಗೂ ಮ್ಯಾನೇಜರ್ ನಾಗರಾಜ್ (ಆರೋಪಿ-11)ಗೂ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಅಪರಾಧಿಕ ಒಳಸಂಚು ನಡೆಸಿ ರೇಣುಕಾಸ್ವಾಮಿಯನ್ನು ಅಪಹರಿಸಿರುವುದು, ಪಟ್ಟಣಗೆರೆ ಶೆಡ್‌ನಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದರಲ್ಲಿ ಪವಿತ್ರಾ ಗೌಡ, ದರ್ಶನ್, ಲಕ್ಷ್ಮಣ್ ಮತ್ತು ನಾಗರಾಜು ಅವರ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದ ಅವರು ಜಾಮೀನು ಪಡೆಯಲು ಯೋಗ್ಯರಾಗಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ರವಿಶಂಕರ್, ದೀಪಕ್‌ಗೆ ಜಾಮೀನು:
ಈ ಮಧ್ಯೆ ಪ್ರಕರಣದ ಎಂಟನೇ ಆರೋಪಿ ರವಿಶಂಕರ್ ಮತ್ತು 13ನೇ ಆರೋಪಿ ದೀಪಕ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ರವಿಶಂಕರ್ ಚಿತ್ರದುರ್ಗದಿಂದ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆತಂದಿರುವ ಕಾರಿನ ಚಾಲಕನಾಗಿದ್ದಾನೆ. ಅಪಹರಣಕ್ಕೆ ರವಿಶಂಕರ್ ಕ್ಯಾಬ್ ಅನ್ನು ಬಳಸಿಕೊಳ್ಳಲಾಗಿತ್ತು. ಆತ ಒಳಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಆದ್ದರಿಂದ ಆತನಿಗೆ ಜಾಮೀನು ನೀಡಬಹುದಾಗಿದೆ. ಇನ್ನು ದೀಪಕ್ ವಿರುದ್ಧ ಸಾಕ್ಷ್ಯ ನಾಶ ಆರೋಪವಿದೆ. ಇದು ಜಾಮೀನು ನೀಡಬಹುದಾದ ಅಪರಾಧ ಪ್ರಕರಣವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಇದರೊಂದಿಗೆ ಪ್ರಕರಣದ 17 ಆರೋಪಿಗಳ ಪೈಕಿ ಐವರಿಗೆ ಜಾಮೀನು ದೊರೆತಂತಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯ ನಾಶ ಆರೋಪ ಎದುರಿಸುತ್ತಿದ್ದ ಕೇಶವಮೂರ್ತಿಗೆ ಹೈಕೋರ್ಟ್, ಕಾರ್ತಿಕ್ ಮತ್ತು ನಿಖಿಲ್ ನಾಯಕ್‌ಗೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿತ್ತು. ಇತರೆ ಆರೋಪಿಗಳಾದ ಪ್ರದೋಷ್, ವಿನಯ್, ಅನುಕುಮಾರ್ ಮತ್ತು ರಾಘವೇಂದ್ರ ಅವರ ಜಾಮೀನು ಅರ್ಜಿಗಳು ವಿಚಾರಣಾ ಹಂತದಲ್ಲಿವೆ.
ಜಾಮೀನು ಅರ್ಜಿ ತಿರಸ್ಕರಿಸಲು ಕಾರಣವೇನು?
1. ಪ್ರತ್ಯಕ್ಷ ದರ್ಶಿಗಳ ಹೇಳಿಕೆ ದಾಖಲಿಸಿಕೊಳ್ಳುವಲ್ಲಿ, ಪಂಚನಾಮೆ ಮತ್ತು ಶವಪರೀಕ್ಷೆ ನಡೆಸುವಲ್ಲಿ ತನಿಖಾಧಿಕಾರಿಗಳು ವಿಳಂಬ ಮಾಡಿದ್ದಾರೆ ಎಂದು ದರ್ಶನ್ ಹಾಗೂ ಪವಿತ್ರಾಗೌಡ ಅವರ ಪರ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಕೇಸ್ ಡೈರಿಯನ್ನು ಪರಿಶೀಲಿಸಿದರೆ, ನಿಗದಿತ ಅವಧಿಯಲ್ಲಿಯೇ ಎಲ್ಲವನ್ನೂ ಮಾಡಲಾಗಿದೆ. ಕಾನೂನು ಪ್ರಕಾರ ಕುಟುಂಬದ ಸದಸ್ಯರು ಗುರುತಿಸಿದ ನಂತರವೇ ಶವ ಪರೀಕ್ಷೆ ಮಾಡಬೇಕಾಗುತ್ತದೆ. ಅದರಂತೆ ರೇಣುಕಾಸ್ವಾಮಿಯ ಮೃತದೇಹದ ಪರೀಕ್ಷೆ ನಡೆಸಿರುವುದು ಸೂಕ್ತವಾಗಿದೆ ಎಂದು ನ್ಯಾಯಾಲಯ ಉತ್ತರಿಸಿದೆ.
2. ಆರೋಪಿಗಳಿಂದ ಸುಪರ್ದಿಗೆ ಪಡೆದಿರುವ ವಸ್ತುಗಳ ಬಗ್ಗೆ ಅನುಮಾನವಿದೆ ಎಂಬ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ಈ ವಿಚಾರಕ್ಕೆ ತನಿಖಾಧಿಕಾರಿಯನ್ನು ಪಾಟಿ ಸವಾಲಿಗೆ ಒಳಪಡಿಸಿದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ ಎಂದಿದೆ.
3.ಪ್ರತ್ಯಕ್ಷ ದರ್ಶಿಗಳ ಹೇಳಿಕೆ ದಾಖಲೆಯಲ್ಲಿನ ವಿಳಂಬ, ಈ ಹಂತದಲ್ಲಿ ಅವರ ಹೇಳಿಕೆಗಳನ್ನು ತಿರಸ್ಕರಿಸುವುದಕ್ಕೆ ಆಧಾರವಾಗುವುದಿಲ್ಲ. ತನಿಖೆಯಲ್ಲಿ ಲೋಪಗಳಿವೆ ಎಂಬ ವಾದಾಂಶವನ್ನು ಟ್ರಯಲ್ (ಪ್ರಕರಣದ ಮುಖ್ಯ ವಿಚಾರಣೆ) ಸಂದರ್ಭದಲ್ಲಿ ಮಾತ್ರ ಪರಿಶೀಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
4.ರೇಣುಕಾಸ್ವಾಮಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಮತ್ತು ಕೊಲೆ ನಡೆದ ಸಂದರ್ಭದಲ್ಲಿ ದರ್ಶನ್ ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂಬ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಮತ್ತು ಸಿಡಿಆರ್ ವಿವರಗಳನ್ನು ಪರಿಶೀಲಿಸಿದರೆ ಘಟನಾ ಸ್ಥಳದಲ್ಲಿ ಆರೋಪಿ ದರ್ಶನ್ ಹಾಜರಿದ್ದರು ಎಂಬುದು ಸ್ಪಷ್ಟವಾಗಿ ತಿಳಿದುಬರಲಿದೆ. ಮುಖ್ಯವಾಗಿ ದರ್ಶನ್ ಬಟ್ಟೆ ಹಾಗೂ ಶೂಗೆ ಮೃತನ ರಕ್ತದ ಕಲೆಗಳು ಅಂಟಿದ್ದು, ಡಿಎನ್‌ಎ ಪರೀಕ್ಷೆಯಿಂದ ಘಟನಾ ಸ್ಥಳದಲ್ಲಿ ಸ್ಥಳದಲ್ಲಿ ಹಾಜರಿದ್ದರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ತೀರ್ಮಾನಿಸಿದೆ.
6.ದೋಷಾರೋಪ ಪಟ್ಟಿ ಮತ್ತು ಮೃತದೇಹದ ಪರೀಕ್ಷೆಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ನ್ಯಾಯಾಲಯ, ಶವಪರೀಕ್ಷೆಯ ವರದಿಯು ರೇಣುಕಾಸ್ವಾಮಿ ಸ್ವಾಮಿ ಬರ್ಬರ/ಭೀಕರವಾಗಿ ಕೊಲೆಯಾಗಿದ್ದಾನೆ ಎಂಬುದನ್ನು ತಿಳಿಸುತ್ತದೆ. ಈ ಎಲ್ಲ ಕಾರಣಗಳಿಂದ ಪವಿತ್ರಾಗೌಡ, ದರ್ಶನ್, ಲಕ್ಷ್ಮಣ್ ಮತ್ತು ನಾಗರಾಜು ಅವರ ಜಾಮೀನು ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಿದೆ.
ರವಿಶಂಕರ್‌ಗೆ ಜಾಮೀನು ಏಕೆ?
ರವಿಶಂಕರ್ ಮೇಲೆ ಹತ್ಯೆ ಮಾಡುವ ಉದ್ದೇಶದಿಂದ ಅಪಹರಣ ಮಾಡಲಾಗಿದೆ ಎಂಬ ಆರೋಪವಿತ್ತು. ಆದರೆ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಲು ಬಳಸಿದ ಕಾರನ್ನು ರವಿಶಂಕರ್ ಚಲಾಯಿಸಿದ್ದಾರೆ ಎಂಬುದು ಆರೋಪವಾಗಿದೆ. ಆದರೆ, ಆತನ ಕಾರನ್ನು ಇತರೆ ಆರೋಪಿಗಳು ಬಾಡಿಗೆಗೆ ಪಡೆದಿದ್ದರು. ರವಿಶಂಕರ್ ಬಾರದಿದ್ದರೆ ಮತ್ತೊಬ್ಬರ ಕಾರನ್ನು ಬಾಡಿಗೆಗೆ ಪಡೆಯಲಾಗುತ್ತಿತ್ತು. ಹಾಗಾಗಿ, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಒಳಸಂಚಿನಲ್ಲಿ ಆತ ಭಾಗಿಯಾಗಿಲ್ಲ ಎಂಬುದಾಗಿ ನಮ್ಮ ವಾದವಾಗಿತ್ತು. ಆ ವಾದವನ್ನು ನ್ಯಾಯಾಲಯ ಪುರಸ್ಕರಿಸಿದ ಜಾಮೀನು ನೀಡಿದೆ ಎಂದು ಮಾಧ್ಯಮಗಳಿಗೆ ರವಿಶಂಕರ್ ಪರ ವಕೀಲ ರಂಗನಾಥ ರೆಡ್ಡಿ ತಿಳಿಸಿದ್ದಾರೆ.
ಕಿಕ್ಕಿರಿದ ಕೋರ್ಟ್ ಹಾಲ್
ಜಾಮೀನು ಅರ್ಜಿ ತೀರ್ಪು ಪ್ರಕಟ ವೇಳೆ ಕೋರ್ಟ್ ಹಾಲ್ ವಕೀಲರು, ಕೋರ್ಟ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಂದ ಕಿಕ್ಕಿರಿದು ತುಂಬಿತ್ತು. ದರ್ಶನ್ ಅರ್ಜಿ ತೀರ್ಪು ಏನಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತುಹೂಲದಿಂದ ಕೋರ್ಟ್‌ಹಾಲ್ ಒಳಗೆ ಹಾಗೂ ಹೊರಗೆ ಜನ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದರು.
ಹೈಕೋರ್ಟ್ ಮೊರೆ ಹೋಗಲು
ದರ್ಶನ್ ವಕೀಲರ ಸಿದ್ಧತೆ
ಸೆಷನ್ಸ್ ನ್ಯಾಯಾಲಯ ಆದೇಶ ಪ್ರಕಟಿಸಿದ ಬೆನ್ನಲ್ಲೇ ದರ್ಶನ್‌ಗೆ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲು ಆತನ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಜಾಮೀನು ಅರ್ಜಿಯನ್ನು ಸಿದ್ಧಪಡಿಸಲಾಗಿದೆ. ಸೆಷನ್ಸ್ ನ್ಯಾಯಾಲಯದ ಆದೇಶ ಪ್ರತಿಗಾಗಿ ಕಾಯುತ್ತಿದ್ದೇವೆ. ಆದೇಶ ಪ್ರತಿ ದೊರೆತ ಕೂಡಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನಷ್ಟು ದಿನ ಜೈಲೇ ಗತಿ
ಜಾಮೀನು ಕೋರಿ ದರ್ಶನ್ ಹೈಕೋರ್ಟ್‌ಗೆ ಒಂದೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಿದರೂ, ಅದು ವಿಚಾರಣೆಗೆ ನಿಗದಿಯಾಗಿ, ಸರ್ಕಾರಿ ಅಭಿಯೋಜಕರಿಗೆ ನೋಟಿಸ್ ಜಾರಿಯಾಗಿ, ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ನಂತರ ವಾದ ಪ್ರತಿವಾದ ಆರಂಭವಾಗಲಿದೆ. ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟವಾಗಲು ಅಂದಾಜು ಮೂರ್ನಾಲ್ಕು ವಾರ ಸಮಯವಾದರೂ ಬೇಕಾಗುತ್ತದೆ. ಹೈಕೋರ್ಟ್ ಜಾಮೀನು ನೀಡಿದರೆ ಮಾತ್ರ ಬಿಡುಗಡೆ ಭಾಗ್ಯ ಒದಗಲಿದೆ. ಹೈಕೋರ್ಟ್ ಜಾಮೀನು ತಿರಸ್ಕರಿಸಿದರೆ, ಸುಪ್ರೀಕೋರ್ಟ್ ಮೊರೆ ಹೋಗುವುದೊಂದೇ ಉಳಿದ ದಾರಿ.