ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ(ಡಿಸಿಆರ್‌ಇ) ಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಸರಸ- ಸಲ್ಲಾಪ ನಡೆಸಿರುವ ವಿಡಿಯೋಗಳು ಮತ್ತು ಆಡಿಯೋಗಳು ಇದೀಗ ವೈರಲ್
ಬೆಂಗಳೂರು : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ(ಡಿಸಿಆರ್‌ಇ) ಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಸರಸ- ಸಲ್ಲಾಪ ನಡೆಸಿರುವ ವಿಡಿಯೋಗಳು ಮತ್ತು ಆಡಿಯೋಗಳು ಇದೀಗ ವೈರಲ್ ಆಗಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ತೀವ್ರ ಮುಂಜುಗರ ಉಂಟು ಮಾಡಿದೆ.
ಸಹಾಯ ಕೇಳಲು ಕಚೇರಿಗೆ ಬಂದವರ ಜತೆ ಹಾಗೂ ಕೆಲ ಆಮಿಷವೊಡ್ಡಿ, ಫಂಡ್ ನೀಡುವುದಾಗಿ ಆಸೆ ಹುಟ್ಟಿಸಿ ಡಿಜಿಪಿ ರಾಮಚಂದ್ರ ರಾವ್ ಸರಸವಾಡಿದ್ದಾರೆ. ಒಬ್ಬ ರೂಪದರ್ಶಿ ಸೇರಿ ಕೆಲ ಮಹಿಳೆಯರ ಜತೆ ಚೆಲ್ಲಾಟ ನಡೆಸಿದ್ದಾರೆ. ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲೇ ಮಹಿಳೆಯರಿಗೆ ಚುಂಬಿಸಿದ್ದು ಮಾತ್ರವಲ್ಲದೆ, ಅವರ ಖಾಸಗಿ ಭಾಗಗಳನ್ನು ಮುಟ್ಟಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ. ಇದರ ಜತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವ 10 ನಿಮಿಷದ ಆಡಿಯೋ ಕೂಡ ವೈರಲ್ ಆಗಿದೆ.
4 ತಿಂಗಳಲ್ಲಿ ನಿವೃತ್ತಿ:
ರಾಮಚಂದ್ರ ರಾವ್ ಅವರು ಇನ್ನು ಕೇವಲ 4 ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದರು. ಅಷ್ಟರಲ್ಲಿ ರಂಗಿನಾಟದ ವಿಡಿಯೋ ಮತ್ತು ಆಡಿಯೋಗಳು ಹೊರಬಂದಿವೆ. ಕೆಲ ತಿಂಗಳುಗಳ ಹಿಂದೆ ಅವರ ಮಲ ಮಗಳು ನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಳು. ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ ಮೇಲೆ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.
ಅಜ್ಞಾತ ಸ್ಥಳಕ್ಕೆ ಡಿಜಿಪಿ?:
47 ಸೆಕೆಂಡ್‌ಗಳ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ಮಾಧ್ಯಮಗಳಿಗೆ ಹಾಗೂ ಸರ್ಕಾರಕ್ಕೆ ಉತ್ತರ ಕೊಡಲಾಗದೇ ರಾಮಚಂದ್ರ ರಾವ್ ಅವರು ಯಾರ ಕೈಗೂ ಸಿಗದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಭೇಟಿ ನಿರಾಕರಿಸಿದ ಗೃಹ ಸಚಿವರು:
ಮಾಧ್ಯಮಗಳಲ್ಲಿ ರಾಸಲೀಲೆಯ ವಿಡಿಯೋ ಪ್ರಸಾರವಾಗುತ್ತಿದಂತೆ ಡಿಜಿಪಿ ರಾಮಚಂದ್ರ ರಾವ್ ಅವರು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಸ್ಪಷ್ಟನೆ ನೀಡಲು ತೆರಳಿದ್ದರು. ಆದರೆ ಗೃಹ ಸಚಿವರು ರಾಮಚಂದ್ರರಾವ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲೇನಿದೆ?:
47 ಸೆಕೆಂಡಿನ ವೈರಲ್ ಆದ ವಿಡಿಯೋದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರು ಮಹಿಳೆಯರ ಎದೆ ಭಾಗಕ್ಕೆ ಮುತ್ತುಕೊಡುವುದು, ತುಟಿಗೆ ಮುತ್ತು ಕೊಡುವುದು (ಲಿಪ್‌ಲಾಕ್) ಮಾಡುವುದು, ತಬ್ಬಿಕೊಳ್ಳುವುದು ಸೇರಿ ಅಸಭ್ಯ ವರ್ತನೆ ತೋರಿದ ದೃಶ್ಯಗಳಿವೆ. ವಿಡಿಯೋದಲ್ಲಿ ಮೂವರು ಮಹಿಳೆಯರು ಇದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಒಬ್ಬಳೇ ಮಹಿಳೆ ಬೇರೆ ಬೇರೆ ಉಡುಪಿನಲ್ಲಿ ಇರಬಹುದು ಎನ್ನಲಾಗುತ್ತಿದೆ. ವಿಡಿಯೋದಲ್ಲಿರುವ ಮಹಿಳೆ ಯಾರು? ಓರ್ವ ಮಹಿಳೆಯಾ? ಅಥವಾ ಹಲವು ಮಹಿಳೆಯರಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋಗಳನ್ನು ಯಾರು ಚಿತ್ರೀಕರಿಸಿದ್ದಾರೆ? ಇದರ ಉದ್ದೇಶ ಏನು? ಈಗ ಈ ವಿಡಿಯೋಗಳನ್ನು ಬಹಿರಂಗಪಡಿಸಿದ್ಯಾಕೆ ಎಂಬುದೂ ನಿಗೂಢವಾಗಿದೆ.
ಇದು ಹಳೆಯ ವಿಡಿಯೋ?:
ವೈರಲ್ ಆಗುತ್ತಿರುವ ವಿಡಿಯೋ ಇತ್ತೀಚಿನದಲ್ಲ. ಇದು ಸುಮಾರು 8 ವರ್ಷಗಳಷ್ಟು ಹಳೆಯದು ಎನ್ನಲಾಗುತ್ತಿದೆ. ರಾಮಚಂದ್ರ ರಾವ್ ಅವರು ಈ ಹಿಂದೆ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕಚೇರಿಯಲ್ಲೇ ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
10 ದಿನಗಳ ರಜೆಗೆ ಅರ್ಜಿ:
ತಮ್ಮ ವಿರುದ್ಧದ ಆರೋಪಗಳು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮತ್ತು ಗೃಹ ಸಚಿವರು ಭೇಟಿಗೆ ನಿರಾಕರಿಸಿದ ಬೆನ್ನಲ್ಲೇ, ರಾಮಚಂದ್ರ ರಾವ್ ಅವರು 10 ದಿನಗಳ ಕಾಲ ರಜೆ ಮೇಲೆ ತೆರಳುತ್ತಿರುವುದಾಗಿ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮ ಅಥವಾ ಅಮಾನತು ಆದೇಶ ಹೊರಬೀಳುವ ಮುನ್ಸೂಚನೆ ಅರಿತು ತನಿಖೆ ಮತ್ತು ಕಾನೂನು ಹೋರಾಟದ ಸಿದ್ಧತೆಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದು ನಾಚಿಕೆಗೇಡಿನ ಸಂಗತಿ. ನಾನು ಗೃಹ ಸಚಿವನಾಗಿ ಒಳ್ಳೆಯ ಅಧಿಕಾರಿಗಳನ್ನೂ ನೋಡಿದ್ದೇನೆ. ಆದರೆ, ಇಂಥವರೆಲ್ಲ ಇಲಾಖೆಗೆ ಶೋಭೆ ತರುವವರಲ್ಲ. ಇವರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದು ದುಷ್ಕೃತ್ಯ. ಪೊಲೀಸ್ ಇಲಾಖೆಯಿಂದಲೇ ಅವರು ಹೊರಹೋಗಬೇಕು. ಎಲ್ಲರಿಗೂ ಅವರು ಕ್ಷಮೆ ಕೇಳಬೇಕು.
-ಅರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ
ರಾಮಚಂದ್ರರಾವ್ ಅವರ ಘನಕಾರ್ಯ ಅಕ್ಷಮ್ಯ ಅಪರಾಧ. ಹಿರಿಯ ಪೊಲೀಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಕಳಂಕ ಮೆತ್ತುವ ಕಾರ್ಯವೆಸಗಿದ್ದಾರೆ. ಹಿಂದೆ ಅವರ ಹೆಸರು ಮತ್ತು ಸ್ಥಾನದ ದುರುಪಯೋಗ ಮಾಡಿಕೊಂಡು ಭಾರೀ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ನಡೆದಿದ್ದಾಗ ಈ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಸರ್ಕಾರ ಇದೀಗ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು.
-ಎಸ್.ಸುರೇಶ್ ಕುಮಾರ್, ಮಾಜಿ ಕಾನೂನು ಸಚಿವ
ಚಿನ್ನ ಸ್ಮಗ್ಲಿಂಗ್ ಕೇಸಲ್ಲಿ ಮಲಮಗಳು ಜೈಲಲ್ಲಿ
ರಾಮಚಂದ್ರ ರಾವ್ ಅವರ ಮಲ ಮಗಳು ನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲು ಸೇರಿದ್ದಳು. ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ ಮೇಲೆ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಕಡ್ಡಾಯ ರಜೆ ಮೇಲೂ ಕಳುಹಿಸಿತ್ತು.
ಯಾರು ಈ ಅಧಿಕಾರಿ
- 1993ನೇ ಬ್ಯಾಚಿನ ಐಪಿಎಸ್ ಅಧಿಕಾರಿ. ಮೂಲತಃ ಆಂಧ್ರದ ಗುಂಟೂರಿನವರು
- 32 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ. ಮುಂದಿನ ಮೇನಲ್ಲಿ ನಿವೃತ್ತಿ ಆಗಬೇಕು
- ಮೈಸೂರಿನಲ್ಲಿ ಡಿಐಜಿ, ಬೆಳಗಾವಿ ವಲಯದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ
- ಮೈಸೂರಿನಲ್ಲಿದ್ದಾಗ 2 ಕೋಟಿ ರು. ದರೋಡೆ ಮಾಡಿಸಿದ ಆರೋಪಕ್ಕೆ ಗುರಿ ಆಗಿದ್ದರು
- ಸಿಐಡಿ ತನಿಖೆ ನಡೆದು ಬಚಾವಾಗಿದ್ದರು. 2023ರಲ್ಲಿ ಡಿಜಿಪಿಯಾಗಿ ಪದೋನ್ನತಿ ಆಗಿದ್ದರು
- ಚಿನ್ನ ಸ್ಮಗಲ್ ಕೇಸಲ್ಲಿ ಬಂಧಿತಳಾಗಿರುವ ನಟಿ ರನ್ಯಾರಾವ್ ಮಲತಂದೆ ಈ ಅಧಿಕಾರಿ
- ಕೇಸ್ ಬೆಳಕಿಗೆ ಬಂದಾಗ ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ರಜೆ ಮೇಲೆ ಕಳಿಸಲಾಗಿತ್ತು
ಸಿಎಂ ಸಿದ್ದು ಆಕ್ರೋಶ: ಸಸ್ಪೆಂಡ್‌ಗೆ ಸೂಚನೆ?
ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾದ ಬೆನ್ನಲ್ಲಿಯೇ ಸಿಟ್ಟಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ವರದಿ ನೀಡುವಂತೆ ಆದೇಶಿಸಿದ್ದಾರೆ. ಜತೆಗೆ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಘಟನೆ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಕೇಳಿದ್ದಾರೆ. ಜವಾಬ್ದಾರಿಯತ ಸ್ಥಾನದಲ್ಲಿರುವ, ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಮಾಡುವಂಥ ಕೆಲಸನಾ ಇದು? ಕಚೇರಿಯಲ್ಲಿ ಎಂಥದ್ದಿದು? ಅದೂ ಯೂನಿಫಾರ್ಮ್ ಹಾಕಿಕೊಂಡು ಈ ರೀತಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ ಎನ್ನಲಾಗಿದೆ.
ಇದು ಎಐ ವಿಡಿಯೋ ಇರಬಹುದು
ವಿಡಿಯೋ ನೋಡಿ ನನಗೆ ಶಾಕ್ ಆಗಿದೆ. ಅದರಲ್ಲಿರುವ ಮಹಿಳೆ ಯಾರು ಎಂಬುದು ನನಗೆ ಗೊತ್ತಿಲ್ಲ. ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿದ್ದೆ.... ಇದು ಸಂಪೂರ್ಣವಾಗಿ ಎಡಿಟ್ ಮಾಡಿದ, ಫ್ಯಾಬ್ರಿಕೇಟೆಡ್ ವಿಡಿಯೋ ಆಗಿದೆ. ಎಐ ಜನರೇಟೆಡ್ ವಿಡಿಯೋ ಇರಬಹುದು. ನನ್ನ ವಿರೋಧಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಇದರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ಈ ಕುರಿತು ತನಿಖೆ ಆಗಬೇಕು.
- ಡಾ। ರಾಮಚಂದ್ರ ರಾವ್, ಡಿಜಿಪಿ


