ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಭಿನವ ಭಾರತಿ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಗ್ಧ ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರನ್ನು ಕಲಿಕೆಯಲ್ಲಿ ತೊಡಗಿಸುವಲ್ಲಿ ಪೋಷಕರು ವಿಫಲರಾಗಿದ್ದಾರೆ. ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ, ಸಂಜೆ ಟ್ಯೂಷನ್‌ಗೆ ಸೇರಿಸಿದರೆ ಅಲ್ಲಿಗೆ ತಮ್ಮ ಜವಾಬ್ದಾರಿ ಮುಗಿಯಿತು. ಇನ್ನು ಮಕ್ಕಳು ಪರೀಕ್ಷೆಗಳಲ್ಲಿ ಗಳಿಸುವ ಅಂಕದ ಮೇಲಷ್ಟೇ ಅವರು ಗಮನವನ್ನು ಕೇಂದ್ರೀಕರಿಸುವುದು ಸಾಮಾನ್ಯವಾಗಿದೆ ಎಂದರು.
ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಮುಖ್ಯವಲ್ಲ. ಮಕ್ಕಳನ್ನು ಕಲಿಕೆಯಲ್ಲಿ ಹೇಗೆ ತೊಡಗಿಸಬೇಕೆಂಬುದು ಮುಖ್ಯ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಪಠ್ಯ ವಿಷಯಗಳು ಸಾಮಾನ್ಯ ಪೋಷಕರಿಗೆ ಅರ್ಥವಾಗುವುದೇ ಇಲ್ಲ. ಅದಕ್ಕಾಗಿ ಟ್ಯೂಷನ್‌ಗೆ ಸೇರಿಸುತ್ತಿದ್ದಾರೆ. ಇದರ ಜೊತೆಯಲ್ಲೇ ಮನೆಯಲ್ಲ್ಲೂ ಮಕ್ಕಳಿಗೆ ಕಲಿಸುವುದನ್ನು ಪೋಷಕರು ರೂಢಿ ಮಾಡಿಕೊಳ್ಳಬೇಕು ಎಂದರು.ಓದುವ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನು ಮೊದಲು ಬಿಡಬೇಕು. ಮಕ್ಕಳನ್ನು ಪ್ರೀತಿಸುವ ಜೊತೆಯಲ್ಲೇ ಅವರ ಮನಸ್ಸನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗಾಗಿಯೇ ಸಮಯವನ್ನು ಮೀಸಲಿಟ್ಟು ಅವರು ಹೇಗೆ ಓದುತ್ತಿದ್ದಾರೆ, ಯಾವ ವಿಷಯದಲ್ಲಿ ಹಿಂದಿದ್ದಾರೆ, ಅವರನ್ನು ತಾಳ್ಮೆ, ಸಹನೆಯಿಂದ ವಿಷಯಗಳನ್ನು ಗ್ರಹಿಸುವಂತೆ ಮಾಡಿ ಓದಿನತ್ತ ಆಸಕ್ತಿ ಮೂಡುವಂತೆ ಮಾಡಬೇಕು. ಆಗ ಅವರೇ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ ಎಂದರು.
ಮಕ್ಕಳ ಮೇಲೆ ಕೇವಲ ಒತ್ತಡ ಹಾಕುವುದರಿಂದ ಓದುತ್ತಾರೆಂಬ ಭಾವನೆ ತಪ್ಪು. ಇದರಿಂದ ಅವರು ಖಿನ್ನತೆಗೆ ಒಳಗಾಗುವ ಆತಂಕವಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಓದಿನ ಜೊತೆಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದೂ ಪೋಷಕರ ಕರ್ತವ್ಯ. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥವಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು ಮಾತನಾಡಿ, ಮಕ್ಕಳು ಕಲಿಕೆಯತ್ತ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮೊಬೈಲ್‌ನಿಂದ ದೂರವಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕು. ಇದರಿಂದ ಕ್ರಿಯಾಶೀಲತೆ ಬೆಳವಣಿಗೆ ಕಾಣುತ್ತದೆ. ಏಕಾಗ್ರತೆ ಮೂಡುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನರ ಮತ್ತು ಮಾನಸಿಕ ರೋಗ ತಜ್ಞ ಡಾ.ಅನಿಲ್ ಆನಂದ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ.ಶಿವಮೂರ್ತಿ ಕೀಲಾರ, ಪ್ರೇರಣಾ ಅಂಧ ಮತ್ತು ಅಂಗವಿಕಲ ಮಕ್ಕಳ ಶಾಲೆಯ ರವಿಕುಮಾರ್, ಅಭಿನವ ಭಾರತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸೌಮ್ಯ ಕುಲಕರ್ಣಿ ಇದ್ದರು.