ಕನ್ನಡಪ್ರಭ ವಾರ್ತೆ ಮಂಡ್ಯ
ಈ ಕುರಿತಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಹುಲಿಕೆರೆ ಗ್ರಾಮ ಪಂಚಾಯ್ತಿಯ ಹಿಂದಿನ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಮೈನಾವತಿ, ಸದಸ್ಯರಾದ ರಾಜೇಶ್ವರಿ, ಎಚ್.ಸಿ.ವೈರಮುಡಿಗೌಡ, ರೇಣುಕಾ, ವಿಜಯ್‌ಕುಮಾರ್, ಬಿ.ಬಿ.ಗೌರಮ್ಮ, ಶ್ವೇತಾ, ಮಹದೇವಮ್ಮ, ಸವಿತಾ, ಎಚ್.ಡಿ.ಹರೀಶ್, ಪ್ರಭಾಕರ, ಎಂ.ಸಿ.ಮಂಜುನಾಥ, ಗೋವಿಂದಶೆಟ್ಟಿ, ಬಸವರಾಜು, ರೇಷ್ಮಾಬಾನು, ಅಂತೋಣಿಸ್ವಾಮಿ, ಶಿಲ್ಪ, ರೇಣುಕಾ, ರಾಮಕೃಷ್ಣ ಅವರನ್ನು ಕರ್ನಾಟಕ ಗ್ರಾಮ ಪಂಚಾಯತ್ ಅಧಿನಿಯಮ-೧೯೯೩ರ ಪ್ರಕರಣ ೪೩(ಎ), ೪೮ (೪), ೪೮ (೫)ರಡಿಯಲ್ಲಿ ಗ್ರಾಪಂ ಕರ್ತವ್ಯಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುವುದರಿಂದ ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ಪತ್ರ ಮುಖೇನ ಕೋರಿದ್ದಾರೆ.
ಲೋಪಗಳೇನು?ಸರ್ಕಾರದ ಆದೇಶ ಮತ್ತು ನಿರ್ದೇಶನದನ್ವಯ ಬಿಲ್ ಕಲೆಕ್ಟರ್ ಹುದ್ದೆಗೆ ಸ್ಥಳೀಯ ಅಭ್ಯರ್ಥಿಗೆ ಪ್ರಥಮ ಆದ್ಯತೆ ನೀಡುವ ವಿಷಯವನ್ನು ಮರೆಮಾಚಿ ಪ್ರಕಟಣೆ ಹೊರಡಿಸಿರುವುದು. ಪ್ರಕಟಣೆ ಹೊರಡಿಸಿದ ನಂತರ ಸ್ವೀಕೃತವಾದ ಅರ್ಜಿಗಳ ಪರಿಶೀಲನೆ ಸಂದರ್ಭದಲ್ಲಿಯೂ ಸಹ ಆಡಳಿತ ಮಂಡಳಿಯ ಗಮನಕ್ಕೆ ತರದೆ ಸ್ವೀಕೃತವಾದ ಅರ್ಜಿಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯನ್ನು ನಿಯಮಬಾಹಿರವಾಗಿ ಆಯ್ಕೆ ಮಾಡಲಾಗಿದೆ.
ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪವಾಗಿದ್ದರೂ ಸಹ ಪರಿಶೀಲಿಸದೆ ಎನ್.ವಿ.ಹೇಮಂತ್‌ಕುಮಾರ್ ಅವರನ್ನು ಹುಲಿಕೆರೆ ಗ್ರಾಮ ಪಂಚಾಯ್ತಿ ಬಿಲ್‌ಕಲೆಕ್ಟರ್ ಹುದ್ದೆಗೆ ನೇಮಕಾತಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ತಾಲೂಕು ಪಂಚಾಯ್ತಿ ಕಚೇರಿಗೆ ಸಲ್ಲಿಸಿರುವುದು. ತಾಪಂ ಶಿಫಾರಸು ಆಧರಿಸಿ ಜಿಲ್ಲಾ ಪಂಚಾಯ್ತಿಯಿಂದ ನಿಯಮಬಾಹಿರವಾಗಿ ಅನುಮೋದನೆ ಪಡೆದಿರುವುದು.ಈ ಎಲ್ಲಾ ಅಂಶಗಳನ್ನು ಬಿಲ್‌ಕಲೆಕ್ಟರ್ ಎನ್.ವಿ.ಹೇಮಂತ್‌ಕುಮಾರ್ ಅಕ್ರಮ ನೇಮಕಾತಿ ಮತ್ತು ಗಂಭೀರ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳ ಕುರಿತು ತನಿಖೆ ನಡೆಸಿದ ಜಿಪಂ ಉಪ ಕಾರ್ಯದರ್ಶಿ (ಆಡಳಿತ), ಉಪಕಾರ್ಯದರ್ಶಿ (ಅಭಿವೃದ್ಧಿ, ಮುಖ್ಯ ಯೋಜನಾಧಿಕಾರಿ, ಲೆಕ್ಕಾಧಿಕಾರಿಯನ್ನೊಳಗೊಂಡ ತನಿಖಾ ತಂಡ ನೀಡಿರುವ ವರದಿಯಲ್ಲಿ ದಾಖಲಿಸಿದೆ.
ಈ ಪ್ರಕರಣ ಕುರಿತಂತೆ ಹುಲಿಕೆರೆ ಗ್ರಾಪಂ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ನೀಡಿರುವ ಸಮಜಾಯಿಷಿ ಒಪ್ಪಲು ಬರುವುದಿಲ್ಲ. ಗ್ರಾಪಂ ಹಿಂದಿನ ಪಿಡಿಒ ನಾಗೇಂದ್ರ ಅವರ ವಿರುದ್ಧ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ನಿಯಮ-೧೧ರಡಿ ಕರ್ತವ್ಯಲೋಪ ಕುರಿತಂತೆ ದೋಷಾರೋಪಣಾ ಪಟ್ಟಿ ಜಾರಿ ಮಾಡಲಾಗಿದೆ. ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಗ್ರಾಪಂ ಕರ್ತವ್ಯಗಳನ್ನು ಉಲ್ಲಂಘಿಸಿರುವುದರಿಂದ ೨೦ ಸದಸ್ಯರ ಸದಸ್ಯತ್ವ ರದ್ದು ಮಾಡುವ ಸಂಬಂಧ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿದೆ. ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.