ಧಾರವಾಡ:
ಇಂದಿನ ಪಾಲಕರಿಗೆ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವುದು ವ್ಯಸನವಿಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ 2ನೇ ದಿನ ಮಂಗಳವಾರ ನಮ್ಮವರು ಗೋಷ್ಠಿಯಲ್ಲಿ ಇಂದಿನ ಶಾಲಾ ಮಕ್ಕಳು ವಿಷಯ ಕುರಿತು ಮಾತನಾಡಿದ ಅವರು, ಪಾಲಕರು ಆಂಗ್ಲಭಾಷೆಯ ಕಲಿಕೆಗೆ ಮಾರು ಹೊಗಿದ್ದಲ್ಲದೆ ಇಂಗ್ಲಿಷ್ ಕಲಿತರೆ ಮಾತ್ರ ನೌಕರಿ ಸಿಗುತ್ತವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಇಂಗ್ಲಿಷ್ ಕಲಿಕೆಗಿಂತಲೂ ಶೇ. 85ರಷ್ಟು ಕನ್ನಡ ಶಾಲೆಗಳಲ್ಲಿ ಕಲಿತವರೆ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಬಹುತೇಕ ಪ್ರಾದೇಶಿಕ ಭಾಷೆಗಳು ಇಂಗ್ಲಿಷ್ ಭಾಷೆಯ ಆಕ್ರಮಣದಿಂದಾಗಿ ಕೇವಲ ಮನೆ ಭಾಷೆಯಾಗಿ ಉಳಿಯುವ ಆತಂಕದಲ್ಲಿವೆ ಎಂದರು.ಪಠ್ಯದಲ್ಲಿ ತುಸು ಹಿಂದಿರುವ ಮಕ್ಕಳಿಗೆ ಅಕ್ಷರ ಜ್ಞಾನ ನೀಡದೆ ನಿರ್ದಾಕ್ಷಿಣ್ಯವಾಗಿ ಖಾಸಗಿ ಶಾಲೆಗಳು ಹೊರ ಹಾಕುತ್ತಿದ್ದು ಇದೀಗ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿವೆ. ರಾಜ್ಯದಲ್ಲಿ ಆರು ಸಾವಿರ ಕನ್ನಡ ಶಾಲೆಗಳು ಮುಚ್ಚಿದ್ದು ಇನ್ನೂ ನಾಲ್ಕು ಸಾವಿರ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಈ ಮೂಲ ಸಮಸ್ಯೆಗೆ ಕೇವಲ ಸರ್ಕಾರದ ವ್ಯವಸ್ಥೆಯಲ್ಲ, ಸಮಾಜವು ಉತ್ತರ ಹುಡುಕಬೇಕಿದೆ ಎಂದು ಹೇಳಿದರು.
ನಮ್ಮ ಹಿರಿಯರು ನಮ್ಮ ಹೆಮ್ಮೆ ವಿಷಯವಾಗಿ ಬಿ.ಎ. ಪಾಟೀಲ ಮಾತನಾಡಿ, ದೇಶದಲ್ಲಿ 20 ಕೋಟಿ ಹಿರಿಯ ನಾರಿಕರಿದ್ದು ಅವರಲ್ಲಿ ಶೇ. 70ರಷ್ಟು ಜನರು ಸರ್ಕಾರದ ಸೌಲಭ್ಯ ವಂಚಿತರಾಗಿ ಬದುಕುತ್ತಿದ್ದಾರೆ. ಸರ್ಕಾರ ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷ ಭಾವನೆ ತೋರುತ್ತಿದೆ ಬೇಸರ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮಕ್ಕಳ ಕಲಿಕೆಯ ಸಮಸ್ಯೆಯಿದೆ. ನಾವು ಶಿಕ್ಷಕರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡಬೇಕಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಪ್ರೀತಿ, ವಿಶ್ವಾಸ, ಧೈರ್ಯ, ಸಂಸ್ಕಾರಗಳನ್ನು ಕಲಿಸಬೇಕು ಎಂದರು.
ಡಾ. ಪ್ರಭುಗೌಡ ಸಂಕಾಗೌಡಶ್ಯಾನಿ ಸ್ವಾಗತಿಸಿದರು. ರಮೇಶ ಸೋಲಾರಗೋಪ್ಪ ನಿರೂಪಿಸಿದರು. ಗಿರೀಶ ಮುಕ್ಕಲ್ಲ ವಂದಿಸಿದರು.