ಸರ್ಕಾರದ ಯೋಜನೆ ಅರ್ಹರಿಗೆ ತಲುಪಿಸಿ: ಸ್ವರೂಪ

KannadaprabhaNewsNetwork |  
Published : Aug 04, 2026, 02:30 AM IST
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಜಾ - ಪಪಂ ಕುಂದುಕೊರತೆ ಸಭೆ ನಡೆಯಿತು | Kannada Prabha

ಸಾರಾಂಶ

ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಅಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆ, ಕಾರ್ಯಕ್ರಮ, ಕಾಯ್ದೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಅಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆ, ಕಾರ್ಯಕ್ರಮ, ಕಾಯ್ದೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತ ರಕ್ಷಣಾ ಹಾಗೂ ಕುಂದು ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ತಾಲೂಕುಗಳಲ್ಲಿ ಲಭ್ಯವಿರುವ ಡಿ.ಸಿ ಮನ್ನಾ ಜಾಗವನ್ನು ಗುರುತಿಸಿ, ಅರ್ಹ ಭೂರಹಿತ ಪಜಾ - ಪರಿಪಂ ಜನರಿಗೆ ಹಂಚಿಕೆ ಮಾಡಲು ತಾಲೂಕಿನ ತಹಸೀಲ್ದಾರ್‌ ಕ್ರಮವಹಿಸಬೇಕೆಂದರು.ಜಿಲ್ಲೆಯಲ್ಲಿರುವ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯಲ್ಲಿ ಪಜಾ - ಮತ್ತು ಪಪಂ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕು. ಪಜಾ ಮತ್ತು ಪರಿಪಂ ಜನಾಂಗದವರಿಗೆ ಸರ್ಕಾರಿ ಯೋಜನೆಯ ಸೌಲಭ್ಯಗಳಿಗೆ ಆಯ್ಕೆಯಾಗಿ ಸ್ವ-ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ನೀಡಲು ಬ್ಯಾಂಕ್‌ಗಳಿಗೆ ವಿವಿಧ ಇಲಾಖೆಗಳಿಂದ ಶಿಫಾರಸು ಮಾಡಿ, ಅರ್ಜಿಗಳನ್ನು ಕಳುಹಿಸಿದಾಗ ಅರ್ಜಿಗಳನ್ನು ಆದ್ಯತೆಯ ಮೇಲೆ ಪರಿಶೀಲಿಸಿ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿ ಜೀವಿಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕೆಂದು ಸೂಚಿಸಿದರು.ಉಡುಪಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪಜಾ ಮತ್ತು ಪಪಂ 4350 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ವಿಮೆಯ ಹೆಲ್ತ್ ಕಾರ್ಡುಗಳನ್ನು ವಿತರಿಸಲಾಗಿದೆ. ಆರೋಗ್ಯ ವಿಮೆಯು ಹೆಚ್.ಡಿ.ಎಫ್.ಸಿ. ಕಂಪನಿಗೆ ನೀಡಲಾಗಿದ್ದು, ಕೆಲವು ತಾಂತ್ರಿಕ ತೊಂದರೆ ಸೇರಿದಂತೆ ಮತ್ತಿತರ ಕಾರಣಗಳಿಂದ ಈ ಯೋಜನೆಗಳ ಲಾಭವನ್ನು ಸರಿಯಾಗಿ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕೆಂದು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ಉಡುಪಿ ತಾಲೂಕಿನ ಲ್ಯಾಂಪ್ಸ್ ಸೊಸೈಟಿಯು ಕಳೆದ 50 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಲ್ಯಾಂಪ್ಸ್ ಸೊಸೈಟಿಗಳಲ್ಲಿ ಕೊರಗ ಸಮುದಾಯದವರಿಗೂ ಉದ್ಯೋಗಾವಕಾಶಗಳನ್ನು ನೀಡಬೇಕೆಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಾಗ ಕೊರಗ ಸಮುದಾಯದವರಿಗೆ ಆದ್ಯತೆಯ ಮೇಲೆ ನೇಮಕಾತಿಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ.ಎಫ್.ಓ. ರುಥ್ರೇನ್ ಪಿ., ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಧಾಕರ್ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲುರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರ್ ಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಂಟಿಕೊಪ್ಪ: ಪಾಳು ಬಿದ್ದ ಕಸ ವಿಲೇವಾರಿ ಘಟಕ
ಉದ್ಯೋಗ ಮೇಳದಲ್ಲಿ ಯುವಜನತೆ ಪಾಲುದಾರಿಕೆ: ವಿವೇಕ್ ಆಳ್ವ ಕರೆ