ಬೆಳೆ ವಿಮೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

KannadaprabhaNewsNetwork |  
Published : Jul 09, 2026, 01:00 AM IST
ಸವಣೂರು ಪಟ್ಟಣದ ಕಂದಾಯ ಸಂಕೀರ್ಣದ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಇತ್ತೀಚೆಗೆ ತಹಸೀಲ್ದಾರ್‌ ರವಿಕುಮಾರ ಕೊರವರ ಅಧ್ಯಕ್ಷತೆಯಲ್ಲಿ ಬೆಳೆ ವಿಮೆ ಹಾಗೂ ರೈತರ ಕುಂದುಕೊರತೆಗಳ ಸಭೆ ನಡೆಯಿತು. | Kannada Prabha

ಸಾರಾಂಶ

ಸವಣೂರು ಪಟ್ಟಣದ ಕಂದಾಯ ಸಂಕೀರ್ಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಬೆಳೆ ವಿಮೆ ಹಾಗೂ ರೈತರ ಕುಂದುಕೊರತೆಗಳ ಸಭೆಯಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ನಿಯಮಗಳಿಂದ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸವಣೂರು: ಪಟ್ಟಣದ ಕಂದಾಯ ಸಂಕೀರ್ಣದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ತಹಸೀಲ್ದಾರ್‌ ರವಿಕುಮಾರ ಕೊರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಬೆಳೆ ವಿಮೆ ಹಾಗೂ ರೈತರ ಕುಂದುಕೊರತೆಗಳ ಸಭೆಯಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ನಿಯಮಗಳಿಂದ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ರೈತ ಮುಖಂಡ ಚನ್ನಪ್ಪ ಮರಡೂರ ಮಾತನಾಡಿ, ರೈತರು ನೈಜವಾಗಿ ಬೆಳೆದಿರುವ ಬೆಳೆಗಳಿಗೆ ವಿಮೆ ಸೌಲಭ್ಯ ದೊರೆಯಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಆದರೆ ಬ್ಯಾಂಕುಗಳು ರೈತರು ಯಾವ ಬೆಳೆಯ ಉದ್ದೇಶಕ್ಕಾಗಿ ಕೃಷಿ ಸಾಲ ಪಡೆದಿರುತ್ತಾರೆಯೋ, ಅದೇ ಬೆಳೆಗೆ ಮಾತ್ರ ವಿಮೆ ಪ್ರೀಮಿಯಂ ಭರಣ ಮಾಡಿಸುತ್ತಿದ್ದು, ರೈತರು ವಾಸ್ತವವಾಗಿ ಬೆಳೆದಿರುವ ಬೆಳೆಗಳಿಗೆ ವಿಮೆ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಸಾಲ ಪಡೆದ ರೈತರು ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಿ, ಆನಂತರ ಅದೇ ಜಮೀನು ಹಾಗೂ ಬೆಳೆಗೆ ಸಾಲ ಪಡೆಯದ ರೈತರಾಗಿ ಗ್ರಾಮ ಒನ್ ಮತ್ತು ಕಾಮನ್ ಸರ್ವೀಸ್‌ ಸೆಂಟರ್‌ಗಳ ಮೂಲಕ ವಿಮೆಗೆ ನೋಂದಣಿ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿರುವ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಈ ವೇಳೆ ರೈತ ಮುಖಂಡ ರಮೇಶ ದಡ್ಡೂರ ಮಾತನಾಡಿ, ಈ ಹೊಸ ನಿಯಮದ ಪ್ರಕಾರ, ಮುಂಬರುವ ಎಲ್ಲ ಹಂಗಾಮುಗಳಲ್ಲಿ ಹಾಗೂ ಯೋಜನೆಯಡಿ ಸಾಲ ಪಡೆಯದ ರೈತರಾಗಿ ನೋಂದಣಿ ಮಾಡಿಸಿಕೊಳ್ಳುವವರು ಕಡ್ಡಾಯವಾಗಿ ಸ್ವಯಂ-ಘೋಷಣಾ ಪತ್ರ ಸಲ್ಲಿಸಬೇಕಾಗಿದೆ. ಇದರಿಂದ ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್ ಮೂಲಕ ವಿಮೆ ಪಡೆಯಲು ಸಾಧ್ಯವಾಗದ ರೈತರಿಗೆ ಗ್ರಾಮ ಒನ್ ಹಾಗೂ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುವ ಅವಕಾಶಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಇದ್ದಂತೆ ಗ್ರಾಮ ಒನ್ ಹಾಗೂ ಸಿಎಸ್‌ಸಿ ಕೇಂದ್ರಗಳ ಮೂಲಕ ಎಲ್ಲ ಅರ್ಹ ರೈತರಿಗೆ ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶ ಮುಂದುವರಿಸಬೇಕು. ಅಲ್ಲದೆ, ಬೆಳೆ ಹಾನಿಗೆ ಬಿಡುಗಡೆಯಾಗುವ ವಿಮೆ ಪರಿಹಾರದ ಮೊತ್ತವನ್ನು ರೈತರ ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡು ರೈತಪರ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ತಹಸೀಲ್ದಾರ್ ರವಿಕುಮಾರ್ ರೈತರ ಬೇಡಿಕೆ ಹಾಗೂ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದರು. ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಭಾಷ್ ಮಜ್ಜಗಿ, ವಿವಿಧ ರೈತ ಸಂಘಟನೆಗಳ ಮುಖಂಡರಾದ ರಮೇಶ ದಡ್ಡೂರ, ಅಬ್ದುಲ್‌ಬುಡಂದಿ, ನೂರ ಅಹ್ಮದ ಮುಲ್ಲಾ, ನಾಗಪ್ಪ ಹಡಪದ, ಚಿಕ್ಕನಗೌಡ್ರ, ಚಂದ್ರು ಜೋಗೆರ, ಬಸಣ್ಣ ಶಾಬಳದ, ಬಸನಗೌಡ ಅರಳಿಹಳ್ಳಿ, ಕಲ್ಲನಗೌಡ ಶಿವನಗೌಡ್ರ, ಶಿವಾನಂದ ಯಲಿಗಾರ, ಪಾಂಡಪ್ಪ ತಿಪ್ಪಕ್ಕನವರ, ಶೇಖಪ್ಪ ತಳವಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್: ಶೇ.90 ಅರ್ಜಿ ವಿತರಣೆ
ಸಿಗದ ಸಮರ್ಪಕ ಪರಿಹಾರ: ಕಾಮಗಾರಿ ಸ್ಥಗಿತಗೊಳಿಸಿ ರೈತರ ಪ್ರತಿಭಟನೆ