ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಬೆರೆಯದಂತೆ ನಿಗಾ ವಹಿಸಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Jun 25, 2025, 01:17 AM ISTUpdated : Jun 25, 2025, 01:18 AM IST
ಬಳ್ಳಾರಿ ಡಿಸಿ ಕಚೇರಿಯ ಕೆಸ್ವಾನ್ ವಿಡೀಯೋ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಭಾಗವಹಿಸಿ, ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ನಗರ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು, ಆಯಾ ತಾಲೂಕು ತಹಶೀಲ್ದಾರರು ನಿಗಾ ವಹಿಸಬೇಕು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳಿಗೆ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು, ಆಯಾ ತಾಲೂಕು ತಹಶೀಲ್ದಾರರು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವೀಡಿಯೋ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮುಂಗಾರು ಮಳೆಗಾಲ ಆರಂಭವಾಗಿರುವುದರಿಂದ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಬೆರೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನಿಗಾ ವಹಿಸಬೇಕು. ಆಯಾ ತಾಲೂಕು ಆರೋಗ್ಯಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಭಾಗದ ತುಂಗಭದ್ರಾ ಜಲಾಶಯವು ಪ್ರಸ್ತುತದಲ್ಲಿ 48.270 ಟಿಎಂಸಿ ನೀರಿನ ಸಂಗ್ರಹಣಾ ಮಟ್ಟ ತಲುಪಿದೆ. ಮಲೆನಾಡು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸುವ ಸಾಧ್ಯತೆ ಇರಲಿದೆ. ಹಾಗಾಗಿ ಕಂಪ್ಲಿ, ಸಿರುಗುಪ್ಪ ಭಾಗದ ನದಿಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಬೇಕು ಎಂದು ಆಯಾ ತಾಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಕಾಳಜಿ ಕೇಂದ್ರಗಳನ್ನು ಸಿದ್ಧತೆಯಲ್ಲಿಟ್ಟುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಒಟ್ಟಾರೆಯಾಗಿ ಅಧಿಕಾರಿಗಳು ಯಾವುದೇ ತುರ್ತು ಸಂದರ್ಭ ನಿರ್ವಹಣೆಗೆ ಸಿದ್ಧರಿರಬೇಕು ಎಂದು ತಿಳಿಸಿದರು.

ಮಳೆಯಿಂದಾಗಿ ಸಾರ್ವಜನಿಕ ಆಸ್ತಿ ಹಾನಿ, ಮಾನವ, ಜಾನುವಾರು ಜೀವಹಾನಿ, ಬೆಳೆ ಹಾನಿ, ಮನೆಗಳ ಹಾನಿ ಬಗ್ಗೆ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು, ತಾಲೂಕುವಾರು ಕ್ರೋಢೀಕರಿಸಿ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಸಾಂಕ್ರಾಮಿಕ ರೋಗಗಳು ಹರಡಲು ಅವಕಾಶ ನೀಡದಂತೆ ಚರಂಡಿಗಳ ಸ್ವಚ್ಛತೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಶೇ.17ರಷ್ಟು ಬಿತ್ತನೆಯಾಗಿದ್ದು, ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ನಗರ ಮತ್ತು ಗ್ರಾಮಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ರಾಜ ಕಾಲುವೆ, ಚರಂಡಿ, ಸೇತುವೆ ಹೂಳು ತೆಗೆದು ಸ್ವಚ್ಛಗೊಳಿಸುವುದರ ಸಂಬಂಧ ಕ್ರಮವಹಿಸಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚು ನೀರು ನಿಲ್ಲುವ ಸ್ಥಳಗಳಲ್ಲಿ ನಿರೇತ್ತಲು 3 ಡಿಸೇಲ್ ಮತ್ತು 3 ಎಲೆಕ್ಟ್ರಿಕಲ್ ಮಷಿನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ನಗರ ವ್ಯಾಪ್ತಿಯ 28 ಕಿಮೀ ವ್ಯಾಪ್ತಿಯ ರಾಜ ಕಾಲುವೆಯಲ್ಲಿ ಈಗಾಗಲೇ 24 ಕಿಮೀ ಸ್ವಚ್ಛಗೊಳಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಸರಬರಾಜು ಮೇಲೆ ಉಂಟಾಗಬಹುದಾದ ವ್ಯತ್ಯಯ ಅಂಶಗಳನ್ನು ಗಮನದಲ್ಲಿರಿಸಿ ವಿದ್ಯುತ್ ಮೂಲ ಸೌಕರ್ಯ ಬಲಪಡಿಸುವುದು, ಯಾವುದೇ ವಿದ್ಯುತ್ ಕಡಿತ, ತುರ್ತುಸ್ಥಿತಿಗೆ ಹಾಜರಾಗಲು ಮತ್ತು ವಿದ್ಯುತ್ ಸರಬರಾಜನ್ನು ತ್ವರಿತವಾಗಿ ಪುನಃ ಸ್ಥಾಪಿಸಲು ರಚಿಸುವುದು ಮತ್ತು ವಿದ್ಯುತ್ ತಂತಿ ಹಾದು ಹೋಗುವ ಮಾರ್ಗಗಳಲ್ಲಿ ಮಳೆ ಗಾಳಿಗೆ ಬೀಳುವಂತಹ ಮರಗಳನ್ನು ಕೊಂಬೆಗಳನ್ನು ಕತ್ತರಿಸಬೇಕು. ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ರಕ್ಷಣಾ ಸಲಕರಣೆಗಳನ್ನು ಸುಸ್ಥಿತಿಯಲ್ಲಿರುವಂತೆ ಕ್ರಮ ವಹಿಸಬೇಕೆಂದು ಅಗ್ನಿ ಶಾಮಕ ಮತ್ತು ಗೃಹ ರಕ್ಷಕದಳ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ತುರ್ತು ಸಂದರ್ಭಗಳಲ್ಲಿ ಇತರೆ ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮರುಪರಿಶೀಲನೆ ನಡೆಸಿ:

ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗುತ್ತಿರುವ ಜೋಳ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿದೆ. ರೈತರ ಎಫ್‌ಐಡಿ ಹೆಸರಿನಲ್ಲಿ ವ್ಯಾಪಾರಿಗಳು ಜೋಳ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕನಿಷ್ಠ ಬೆಂಬಲ ಯೋಜನೆಯಡಿಯ ಬೆಲೆಯು ಅಧಿಕವಾಗಿರುವುದರಿಂದ ಹೆಚ್ಚಾಗಿ ಮಾರಾಟವಾಗುತ್ತಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಎಲ್ಲಾ ತಹಶೀಲ್ದಾರರು, ಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಂಡ ಎಲ್ಲಾ ರೈತರ ಎಫ್‌ಐಡಿಗಳನ್ನು ಮರು ಪರಿಶೀಲಿಸಬೇಕು ಎಂದರು.

ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ಭಾಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತಿದ್ದು, ವ್ಯಾಪಾರಿಗಳ ಹಾವಳಿ ಹೆಚ್ಚಾಗಿದ್ದು, ಈ ಬಾರಿ ಪಿಆರ್ ಗಳ ನೇಮಕ ಮಾಡುವಲ್ಲಿ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಹಶೀಲ್ದಾರರು ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು