ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ: ತರೀಕೆರೆಯಲ್ಲಿ ಸಂಭ್ರಮ

KannadaprabhaNewsNetwork | Published : Jan 22, 2024 2:15 AM

ಸಾರಾಂಶ

ಆಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಶುಭ ಕೋರುವ ಶ್ರೀರಾಮ ದೇವರ ಸುಂದರ ಮೂರ್ತಿ ಇರುವ ಮತ್ತು ಭವ್ಯ ಶ್ರೀರಾಮ ಮಂದಿರದ ಅಲಂಕೃತ ಚಿತ್ರವಿರುವ ಬೃಹತ್ ಗಾತ್ರದ ಪ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ರಾರಾಜಿಸುತ್ತಿದೆ

ಕನ್ನಡಪ್ರಭ ವಾರ್ತೆ ತರೀಕೆರೆ

ಆಯೋದ್ಯೆಯಲ್ಲಿ ಜ.22 ರಂದು ವಿಜೃಂಭಣೆ, ಸಡಗರ ಸಂಭ್ರಮದಿಂದ ನೆಡೆಯಲಿರುವ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಶ್ರೀ ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆ ತರೀಕೆರೆ ಪಟ್ಟಣ ಸರ್ವಾಲಂಕೃತಗೊಳ್ಳಿಸಿ ಶ್ರೀರಾಮ ಭಕ್ತರು ಅತ್ಯುತ್ಸಾಹದಿಂದ ಸಂಭ್ರಮಿಸಲ್ಲಿದ್ದಾರೆ.

ಪಟ್ಟಣದ ಅನೇಕ ದೇವಸ್ಥಾನಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರಿಗೆ ವಿಶೇಷ ಅಭಿಷೇಕ ಪೂಜೆ ಇತ್ಯಾದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಶುಭ ಕೋರುವ ಶ್ರೀರಾಮ ದೇವರ ಸುಂದರ ಮೂರ್ತಿ ಇರುವ ಮತ್ತು ಭವ್ಯ ಶ್ರೀರಾಮ ಮಂದಿರದ ಅಲಂಕೃತ ಚಿತ್ರವಿರುವ ಬೃಹತ್ ಗಾತ್ರದ ಪ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ರಾರಾಜಿಸುತ್ತಿದೆ.

ದೇವಸ್ಥಾನ ಮತ್ತು ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ, ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕರಿಸಲಾಗುತ್ತಿದ್ದು, ಮನೆಗಳಲ್ಲಿ ಶ್ರೀರಾಮ ಕೀರ್ತನೆ, ಶ್ರೀರಾಮ ಭಜನೆ ಆಯೋಜಿಸಲಾಗಿದೆ. ಆಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರ ಪ್ರಾಣಪ್ರತಿಷ್ಠಾಪನಾ ಸುಸಂದರ್ಭದಲ್ಲಿ ಪಟ್ಟಣದ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 9-30ಕ್ಕೆ ಸರಿಯಾಗಿ ಶ್ರೀ ರಾಮತಾರಕ ಹೋಮವನ್ನು ಏರ್ಪಡಿಸಲಾಗಿದೆ. ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ಪಟ್ಟಣದ ಬ್ರಾಹ್ಮಣ ಸೇವಾ ಸಮಿತಿ ಪ್ರಕಟಿಸಿದೆ.

ಡಿವೈನ್ ಸ್ಪಾರ್ಕ್ ವಿವೇಕ ಜಾಗೃತ ಬಳಗದ ವತಿಯಿಂದ ಪ್ರತಿ ಮನೆಗೆ ಶ್ರೀರಾಮ ರಕ್ಷಾಸ್ತೋತ್ರ ವಿತರಿಸಲಾಗಿದ್ದು, ಜ.22 ರಂದು ಬಳಗದ ಮಂಜುನಾಥ್ ಅವರ ನಿವಾಸದಲ್ಲಿ ಶ್ರೀರಾಮ ಭಜನೆ, ಶ್ರೀರಾಮಸಂದೀಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣ ಸಮೀಪದ ದೋರನಾಳು, ಕುಡ್ಲೂರು, ಕೊರಟೀಕೆರೆ, ದುಗ್ಲಾಪುರ ಮತ್ತು

ಕುಂಟಿನಮಡು ಗ್ರಾಮಗಳಲ್ಲಿ ಶ್ರೀರಾಮರಕ್ಷಾ ಸ್ತೋತ್ರದ ಮಹಿಮೆ ತಿಳಿಸಲಾಗಿದೆ ಎಂದು ಬಳಗದ ಮುಖ್ಯಸ್ಥರು ತಿಳಿಸಿದ್ದಾರೆ.

ರೈಲು ನಿಲ್ದಾಣದ ಬಳಿ ಇರುವ ಶ್ರೀರಾಮ ಮಂದಿರದಲ್ಲಿ ಗೋಪೂಜೆ, ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀರಾಮತಾರಕ ಹೋಮ ವಿಶೇಷ ಪೂಜೆ, ಮಂಗಳಾರತಿ, ಸಾಯಂಕಾಲ ಭಜನೆ, ಶ್ರೀರಾಮನಾಮ ಜಪ ಹಾಗೂ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮ ಮಂದಿರದ ಧರ್ಮದರ್ಶಿಗಳಾದ ಎ.ಎಸ್. ಸಾಯಿಕುಮಾರ್ ತಿಳಿಸಿದ್ದಾರೆ.

ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ನಾಲ್ಕು ತಲೆಮಾರುಗಳಿಂದ ನಮ್ಮ ಮನೆಯಲ್ಲಿ ಪೂಜಿಸಿಕೊಂಡು ಬಂದಿರುವ ವಿವಿಧ ದೇವರ ವಿಗ್ರಹಗಳಿಗೆ ಸಾಲಿಗ್ರಾಮಕ್ಕೆ ವಿಶೇಷ ಪೂಜೆ, ಅಭಿಷೇಕ ಶ್ರೀರಾಮನಾಮ ಭಜನೆ ಶ್ರೀರಾಮ ಸಂಕೀರ್ತನೆ ನಮ್ಮ ಮನೆಯಲ್ಲಿ ಏರ್ಪಡಿಸಲಾಗಿದೆ ಎಂದು ಅಂಜನೇಯಸ್ವಾಮಿ ಅನನ್ಯ ಭಕ್ತರಾದ ಕನ್ನಡ ಶ್ರೀ ಬಿ.ಎಸ್.ಭಗವಾನ್ ಅವರು ತಿಳಿಸಿದ್ದು, ಬಾಲರಾಮನ ಪ್ರತಿಷ್ಠಾಪನೆ ನೆರವೇರುತ್ತಿರುವುದು ನಮ್ಮಲ್ಲೆರ ಸುಕೃತ ಫಲವಾಗಿದೆ ಎಂದು ತಿಳಿಸಿದ್ದಾರೆ.

ಪಟ್ಟಣದ ಕಂಚಿನ ಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಉದ್ಘಾಟನಾ ದಿವಸ ಶ್ರೀ ಆಂಜನೇಯ ಸ್ವಾಮಿಗೆ ಮಹಾಭಿಷೇಕ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.

Share this article