ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದಿಂದ ಮೆರವಣಿಗೆ ಮೂಲಕ ಹೊರಟ ಹಿಂದೂ ಮಹಾ ಗಣಪತಿ ಹೆದ್ದಾರಿಯಿಂದ ಚಳ್ಳಕೆರೆ ಗೇಟ್ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಪೆಂಡಾಲ್‍ಗೆ ಆಗಮಿಸಿತು.
ಕೇಸರಿ ಭಾವುಟ, ಜೈಶ್ರೀರಾಮ್ ಎಂದು ಬರೆದಿದ್ದ ಹನುಮನ ಭಾವಚಿತ್ರವುಳ್ಳ ಭಾವುಟಗಳು, ಶಾರದಾ ಬ್ರಾಸ್ ಬ್ಯಾಂಡ್‍ನ ವಾದ್ಯ ಮೆರವಣಿಗೆಯಲ್ಲಿ ರಾರಾಜಿಸಿದವು. ನೂರಾರು ಬೈಕ್‍ಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಕುಣಿದು ಕುಪ್ಪಳಿಸಿದರು. ಚಳ್ಳಕೆರೆ ಗೇಟ್‍ನಲ್ಲಿ ಡೊಳ್ಳು, ತಮಟೆ ಮೂಲಕ ಹಿಂದೂ ಮಹಾ ಗಣಪತಿಯನ್ನು ಬರಮಾಡಿಕೊಳ್ಳಲಾಯಿತು.ಚಿಕ್ಕಬಳ್ಳಾಪುರದಲ್ಲಿ ತಯಾರು ಮಾಡಲಾದ ಗಣಪತಿಯನ್ನು ತೆರೆದ ಲಾರಿಯಲ್ಲಿ ತರಲಾಯಿತು. ಗರುಡನ ಮೇಲೆ ವಿರಾಜಮಾನವಾಗಿರುವ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಲು ಸಹಸ್ರಾರು ಜನ ಜಮಾಯಿಸಿದ್ದರು.
21 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ‍್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, 28 ರಂದು ಶೋಭಾಯಾತ್ರೆ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.