ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಜೆ 5ರ ವೇಳೆಗೆ ಆಟಗಾರರು ವಿಧಾನಸೌಧ ಬಳಿ ಆಗಮಿಸಿದರು. ಅಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ವಿಧಾನಸೌಧ ಮಾತ್ರವಲ್ಲದೇ ಕ್ರೀಡಾಂಗಣದ ಗೇಟ್‌ಗಳ ಬಳಿಯೂ ಅಪಾರ ಪ್ರಮಾಣದ ಪ್ರೇಕ್ಷಕರು ಜಮಾಯಿಸಿದ್ದರು. ಎಲ್ಲರೂ ಕ್ರೀಡಾಂಗಣಕ್ಕೆ ಒಂದೇ ಬಾರಿಗೆ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿತು. 5.15ರ ವೇಳೆಗೆ ಮಳೆ ಸುರಿದ ಕಾರಣ ಪ್ರೇಕ್ಷಕರು ಓಡಲು ಶುರು ಮಾಡಿದ್ದರಿಂದ ಮತ್ತಷ್ಟು ಅನಾಹುತ ಘಟಿಸಿತು. ಆಟಗಾರರು ವಿಧಾನಸೌಧದಿಂದ ಕ್ರೀಡಾಂಗಣ ಬಳಿ ಬರುವಾಗ ಮತ್ತಷ್ಟು ಪ್ರೇಕ್ಷಕರು ಗೇಟ್‌ಗಳ ಬಳಿ ಜಮಾಯಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಮಕ್ಕಳು, ಮಹಿಳೆಯರು ಕೂಡಾ ಜನಸಂದಣಿ ನಡುವೆ ಸಿಲುಕಿ ತೊಂದರೆ ಅನುಭವಿಸಿದರು.
ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕಾಲ್ನಡಿಗೆಯಲ್ಲಿ 10 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಆದರೆ 1 ಗಂಟೆಯಾದರೂ, ಕ್ರೀಡಾಂಗಣ ತಲುಪಲು ಸಾಧ್ಯವಾಗಲಿಲ್ಲ. ಕ್ರೀಡಾಂಗಣದ ಹಲವು ಭಾಗಗಳಲ್ಲಿ 12 ಅಡಿ ಎತ್ತರದ, ಮುಳ್ಳು ತಂತಿಗಳನ್ನು ಹಾಕಿರುವ ಗೋಡೆಗಳನ್ನು ಹಾರಿ ಜನರ ಕ್ರೀಡಾಂಗಣದ ಒಳಗೆ ಜಿಗಿಯುತ್ತಿದ್ದ ದೃಶ್ಯಗಳು ಕಂಡುಬಂದವು.ಗೇಟ್ ಬದಲಿಸಿದ್ದರಿಂದ ಗೊಂದಲ
ಆರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಗೇಟ್ ನಂ.10ರಲ್ಲಿ ಪ್ರವೇಶವಿದೆ ಎಂದು ಹೇಳಲಾಗಿತ್ತು. ಆದರೆ ದಿಢೀರ್ ಗೇಟ್ ಸಂಖ್ಯೆ ಬದಲಿಸಿ 12 ಮತ್ತು 13ನೇ ಗೇಟ್ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶಿಸಲು ಸೂಚಿಸಲಾಯಿತು. ಪ್ರೇಕ್ಷಕರಿಗೆ ಮುಖ್ಯ ಗೇಟ್‌ನ ಪಕ್ಕದಲ್ಲಿರುವ ಸಣ್ಣ ಗೇಟ್‌ಗಳ ಮೂಲಕ ಒಳ ಪ್ರವೇಶಿಸಲು ಸೂಚಿಸಲಾಗಿದ್ದರೂ, ಮುಖ್ಯ ಗೇಟ್‌ನಿಂದಲೂ ಒಳ ನುಗ್ಗಲು ಯತ್ನಿಸಿದರು. ಸಣ್ಣ ಪ್ರವೇಶ ದ್ವಾರದ ಮೂಲಕ ಏಕಕಾಲಕ್ಕೆ 300-400 ಜನ ನುಗ್ಗಲು ಯತ್ನಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಅನೇಕರು ಗೇಟ್‌ಗಳ ಮಧ್ಯೆ ಸಿಲುಕಿ ನೋವಿನಲ್ಲಿ ಒದ್ದಾಡಿದರು.
ಒಳಗೆ ಸಂಭ್ರಮಾಚರಣೆ!
ಕ್ರೀಡಾಂಗಣದ ಸುತ್ತಮುತ್ತ
ಕಾಲ್ತುಳಿತ ಉಂಟಾಗಿದ್ದರಿಂದ ಕ್ರೀಡಾಂಗಣದ ಬಳಿ ಹಲವು ಆ್ಯಂಬುಲೆನ್ಸ್‌ಗಳು ಇದ್ದವು. ಒಂದೆಡೆ ಪ್ರೇಕ್ಷಕರು ಆರ್‌ಸಿಬಿ ಪರ ಜೈಕಾರ ಕೂಗುತ್ತಿದ್ದರೆ, ಮತ್ತೊಂದೆಡೆ ಕ್ರೀಡಾಂಗಣದ ಸುತ್ತಲೂ ಆ್ಯಂಬುಲೆನ್ಸ್‌ಗಳ ಸೈರನ್ ಕೇಳಿ ಬರುತ್ತಿದ್ದವು. ನೆರೆದಿದ್ದ ಜನಸಂದಣಿ ನಡುವೆ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೂ ಅಡ್ಡಿ ಉಂಟಾಯಿತು.