ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ್ ಕುಮಾರ್ ಎಚ್.ಜಿ ಅವರು, ಪ್ರಪಂಚದಲ್ಲಿ ಜೀವಿಸುವ ಪ್ರತಿಯೊಬ್ಬ ಮನುಷ್ಯನಿಗೆ ಶುದ್ಧವಾದ ಗಾಳಿಯು ಅತಿ ಅವಶ್ಯಕತೆ ಇದೆ. ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಭೂಮಿಯ ಫಲವತ್ತತೆಯನ್ನು ಸಮತೋಲನವಾಗಿ ಕಾಪಾಡುವುದು ಮಳೆಯ ನೀರು ಎಂಬುದನ್ನು ಮರೆಯಬಾರದು. ಇಂದು ರೈತಾಪಿ ವರ್ಗವು ಶೇ. ೬೦ ಭಾಗ ಮಳೆ ನೀರನ್ನು ಅವಲಂಬಿಸಿದ್ದಾರೆ ಎಂದರು.
ಮರಗಿಡಗಳನ್ನು ಕಡಿಯುವುದರಿಂದ ಕಾಡು ಹಾಗೂ ಅರಣ್ಯ ಪ್ರದೇಶಗಳನ್ನು ನಾಶ ಮಾಡುವುದರಿಂದ ಮುಂದಿನ ಪೀಳಿಗೆಗಳಿಗೆ ಹಾಗೂ ರೈತರಿಗೆ ತುಂಬಾ ನೀರಿನ ಸಮಸ್ಯೆ ಎದುರಾಗುತ್ತದೆ. ಶುದ್ಧ ಗಾಳಿಯ ಸಮಸ್ಯೆ ಹಾಗೂ ಪರಿಸರದ ಏರುಪೇರುಗಳು ವಿಕೋಪಗಳಿಗೆ ಮನುಷ್ಯನೇ ಕಾರಣನಾಗುತ್ತಾನೆ. ಆದ್ದರಿಂದ ದಯಮಾಡಿ ಹೆಚ್ಚು ಮರಗಳನ್ನು ನೆಡಬೇಕು. ನೆಟ್ಟಂತ ಮರಗಳನ್ನು ಪೋಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು. ಇದರಿಂದ ಮುಂದಿನ ಪೀಳಿಗೆಗಳಿಗೆ ಉತ್ತಮ ಜೀವನವನ್ನು ಹಾಗೂ ಪರಿಶುದ್ಧ ಗಾಳಿ, ನೀರು, ಭೂಮಿಯನ್ನು ಕೊಡುಗೆಯಾಗಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯುವರಾಜ್ ಎಸ್. ಅವರು ಮಾತನಾಡಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ನಮ್ಮ ಚನ್ನರಾಯಪಟ್ಟಣ ತಾಲೂಕಿನಲ್ಲಿ ಉತ್ತಮ ಸೇವೆಯನ್ನು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ, ಈ ದಿನ ಪರಿಸರ ದಿನಾಚರಣೆಯನ್ನು ಆಚರಿಸುತ್ತಿರುವುದು ಬಹಳ ವಿಶೇಷ, ಕಾರಣ ಭೂಮಿತಾಯಿಯನ್ನು ತಂಪಾಗಿಡಲು ಭೂಮಿತಾಯಿಗೆ ಸಂತೋಷ ಕೊಡಲು ಮರ ಗಿಡಗಳನ್ನು ಬೆಳೆಸುವುದರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಕಾರ್ಯಕ್ರಮದ ಆಯೋಜಕರಾದ ಆರೋಗ್ಯ ವೈದ್ಯಾಧಿಕಾರಿ ಡಾ. ತೇಜಸ್ವಿನಿ ಪಿ. ಅವರು ಮಾತನಾಡಿ, ಪರಿಸರ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಿರುವ ಹಾಗೂ ಪ್ರತಿಯೊಬ್ಬ ಮನುಷ್ಯನು ಅವಲಂಬಿತವಾಗಿರುವುದು ಸತ್ಯದ ಸಂಗತಿ, ಆದರೆ ಇದು ತಿಳಿದಿದ್ದರೂ ಮರಗಿಡಗಳನ್ನು ನಾಶಪಡಿಸುತ್ತೇವೆ, ಇದರಿಂದ ಮುಂದೊಂದು ದಿನ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅತಿ ಹೆಚ್ಚು ಗಿಡಮರಗಳನ್ನು ಬೆಳೆಸಲು ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಕಿಶೋರ್ ಕುಮಾರ್ ಸಿ.ಎಸ್, ನಿರ್ದೇಶಕ ರಾಜಪ್ಪ ಡಿ.ಪಿ, ಸದಸ್ಯರಾದ ಯಶೋಧ ಜೈನ್, ನಾಗರಾಜ್, ರೂಪ ಸಾರ್ವಜನಿಕ ಕೆಂಚೇಗೌಡ ಆಸ್ಪತ್ರೆ ಚನ್ನರಾಯಪಟ್ಟಣ ಹಾಗೂ ಎಲ್ಲಾ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.