ಶಿರಹಟ್ಟಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪರಿಸರಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸಸಿಗಳನ್ನು ನೆಟ್ಟು ಮುಂಬರುವ ಪೀಳಿಗೆಗೆ ಉತ್ತಮ ವಾತಾವರಣ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್. ಪಾಟೀಲ ತಿಳಿಸಿದರು.
ದೇಶ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಮ್ಮ ಹಳ್ಳಿಗಳಿಂದ ಸಸಿ ನೆಡುವ ಕಾರ್ಯಕ್ರಮ ಪ್ರಾರಂಭವಾಗಬೇಕು. ಆರೋಗ್ಯವೇ ಭಾಗ್ಯವೆಂಬ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಉಸಿರಾಡುವ ಗಾಳಿ, ಸೇವಿಸುವ ಆಹಾರ, ನೈರ್ಮಲ್ಯ ಮುಕ್ತ ನೀರು ತುಂಬಾ ಪ್ರಮುಖವಾದವುಗಳಾಗಿವೆ. ಇದನ್ನು ಇಂದಿನ ದಿನದಂದು ಉತ್ತಮವಾಗಿ ಪ್ರಾರಂಭಿಸೋಣ ಎಂದರು. ನಿವೃತ್ತ ಉಪನ್ಯಾಸಕ ಸಿ.ಎಸ್. ಅರಸನಾಳ ಮಾತನಾಡಿ, ಪ್ರಕೃತಿ ಮನುಷ್ಯನ ಆಸೆ ಈಡೇರಿಸಬಲ್ಲದು. ಆದರೆ ದುರಾಶೆ ಈಡೇರಿಸಲಾರದು. ಪ್ಲಾಸ್ಟಿಕ್ ಹಾಗೂ ರಾಸಾಯನಿಕ ಬಳಕೆಯು ಬದುಕನ್ನು ಕಷ್ಟಕರವಾಗಿಸುತ್ತದೆ. ರಾಸಾಯನಿಕ ಬಳಕೆ ಮಾಡದೇ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಹೊಲಗಳಲ್ಲಿ ಮಣ್ಣಿನ ಸವಕಳಿಯನ್ನು ತಡೆಯಲು ಹೆಚ್ಚಿನ ಗಿಡಗಳನ್ನು ನೆಡುವುದರಿಂದ ಸಮಾಜ ಹಾಗೂ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಅರವಳಿಕೆ ತಜ್ಞೆ ಡಾ. ಶ್ವೇತಾ ಸಜ್ಜನವರ ಉಪನ್ಯಾಸ ನೀಡಿದರು. ತಿಪ್ಪಣ್ಣ ಕೊಂಚಿಗೇರಿ, ಕೆ.ಸಿ. ಕೂಸನೂರಮಠ, ಶಾಂತ ಎಚ್.ಎಂ., ಟಿ.ಎಸ್. ಕರಿಯಣ್ಣವರ, ವಿಶ್ವನಾಥ ಲಮಾಣಿ ಸೇರಿದಂತೆ ಇತರರು ಇದ್ದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಜುಮ್ಮಣ್ಣವರ ವಂದಿಸಿದರು.