ಎಸ್ಸೆಸ್ಸೆಲ್ಸಿ ಪರೀಕ್ಷೆ: ತಾಲೂಕಿಗೆ ಉತ್ತಮ ಫಲಿತಾಂಶಕ್ಕೆ ಮುಂದಾಗಿ; ಶಾಸಕ ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork | Published : Dec 3, 2024 12:30 AM

ಸಾರಾಂಶ

ದೂರದೃಷ್ಟಿಯ ಆಧುನಿಕ ನಾಗಲೋಟದಲ್ಲಿ ಜಗತ್ತು ಹೋಗುತ್ತಿರುವ ಪ್ರಸ್ತುತ ಇಂಗ್ಲಿಷ್ ಭಾಷೆ ಹಿಡಿತದಲ್ಲಿ ಗ್ರಾಮೀಣ ಮತ್ತು ಪಟ್ಟಣದ ವಿದ್ಯಾರ್ಥಿಗಳಲ್ಲಿ ಅಂತರ ಹೆಚ್ಚಾಗುತ್ತಿದೆ. ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸದಂತೆ ದೇಶದ ಭವಿಷ್ಯ ರೂಪಿಸುವ ಜಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮುನ್ನುಡಿ ಬರೆಯುವಂತೆ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರು ಜವಾಬ್ದಾರರಾಗುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಒತ್ತಡ ನಿರ್ವಹಣೆ ಕುರಿತು ಸ್ಫೂರ್ತಿ ಸಿಂಚನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು.

ದೂರದೃಷ್ಟಿಯ ಆಧುನಿಕ ನಾಗಲೋಟದಲ್ಲಿ ಜಗತ್ತು ಹೋಗುತ್ತಿರುವ ಪ್ರಸ್ತುತ ಇಂಗ್ಲಿಷ್ ಭಾಷೆ ಹಿಡಿತದಲ್ಲಿ ಗ್ರಾಮೀಣ ಮತ್ತು ಪಟ್ಟಣದ ವಿದ್ಯಾರ್ಥಿಗಳಲ್ಲಿ ಅಂತರ ಹೆಚ್ಚಾಗುತ್ತಿದೆ. ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸದಂತೆ ದೇಶದ ಭವಿಷತ್ ರೂಪಿಸುವ ಜಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮುನ್ನುಡಿ ಬರೆಯುವಂತೆ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು. ವೈಯಕ್ತಿಕ ಅಥವಾ ಪರಿಸರದ ಕಾರಣಗಳಿಂದ ಶಿಕ್ಷಕರ ಮನಸ್ಸು ಬೇರೆಡೆಗೆ ಹೋದರೇ ನಿಮ್ಮಿಂದ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳು ವಂಚನೆಗೆ ಒಳಗಾಗಿ ಹಿನ್ನಡೆ ಸಾಧಿಸುವ ಸಂಭವ ಎದುರಾಗುವುದರಿಂದ ಶಿಕ್ಷಕ ವೃಂದ ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಬೇಕು ಎಂದರು.

ಕೂಲಿ ಮಾಡುವ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪೋಷಕರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಕೂಡ ತಮ್ಮ ಮಕ್ಕಳು ವಿದ್ಯಾವಂತರಾಗಿ ದೊಡ್ಡ ಹುದ್ದೆ ಆಲಂಕರಿಸಬೇಕು ಎಂದು ಕನಸು ಕಾಣುತ್ತಾರೆ. ಪೋಷಕರ ಆಸೆಗೆ ಶಿಕ್ಷಕರು ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ವಿದ್ಯಾರ್ಥಿಗಳ ತಪ್ಪು ಹೆಜ್ಜೆಗಳನ್ನು ಸರಿಪಡಿಸಿ ಆತ್ಮಸ್ಥೆರ್ಯ ತುಂಬುವುದರ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಖುಷಿಯಿಂದಲೇ ಪರೀಕ್ಷೆ ಎದುರಿಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎನ್ ಡಾ. ರವೀಶ್ ಮಾತನಾಡಿ, ಶಿಕ್ಷಕರು ಹಾಕಿಕೊಟ್ಟ ಹಾದಿಯಲ್ಲಿ ವಿದ್ಯಾರ್ಥಿಗಳು ನಡೆಯುವುದರಿಂದ ಸ್ವಷ್ಟ ಹಾಗೂ ನಿಖರ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಬೇಕು, ಪರೀಕ್ಷೆ ಎದುರಿಸುವುದು ಹೇಗೆ ಎನ್ನುವುದು ಸೇರಿದಂತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುವ ರೀತಿಯಲ್ಲಿ ಶಿಕ್ಷಣ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸುರೇಶ್‌ಕುಮಾರ್, ಡಿವೈಎಸ್‌ಪಿ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಬಿಜಿಪುರ ಮಂಟೇಸ್ವಾಮಿ ಮಠದ ಬಿ.ಪಿ ಭರತ್‌ರಾಜೇಆರಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವು, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪುಟ್ಟರಾಜು, ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ ಪ್ರಕಾಶ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಟಿ ರಾಮಲಿಂಗಯ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ಇತರರು ಇದ್ದರು.

Share this article