ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಶಿರಾ ರಸ್ತೆಯ ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಎರಡು ಪ್ರಶಸ್ತಿಗಳಿಗೆ ದತ್ತಿ ಸ್ಥಾಪಿಸಿರುವ ಡಾ.ಎನ್. ನಾರಾಯಣಪ್ಪ- ಜಯಮ್ಮ ಸಾಧನಾ ಪ್ರಶಸ್ತಿ ಸ್ಥಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿವಂಗತ ಕುಮಾರಿ ಸುಧಾರವರ ಹೆಸರಿನಲ್ಲಿ ‘ಕುಮಾರಿ ಸುಧಾ-ಜಯಮ್ಮ-ನಾರಾಯಣಪ್ಪ’ಪ್ರತಿಭಾ ಪುರಸ್ಕಾರವು ಮೊದಲ ಪ್ರಶಸ್ತಿ. ಈ ಪ್ರಶಸ್ತಿಯನ್ನು ಫಿಸಿಯೋಥೆರಪಿಯಾ ಅಧ್ಯಯನ ಮಾಡುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುತ್ತದೆ. ನಗದು ಬಹುಮಾನ ಪ್ರಮಾಣ ಪತ್ರ ಹಾಗೂ ಸನ್ಮಾನವನ್ನು ಈ ಪ್ರಶಸ್ತಿ ಒಳಗೊಂಡಿರುತ್ತದೆ. ಅದೇ ರೀತಿ ಫಿಸಿಯೋಥೆರಪಿಸ್ಟ್ ಡಾ.ಎನ್.ನಾರಾಯಣಪ್ಪ - ಜಯಮ್ಮ ಸಾಧನಾ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ ಫಿಸಿಯೋಥೆರಪಿಸ್ಟ್ ಸೇವೆಯಲ್ಲಿ ಕ್ಲಿನಿಕಲ್ ವಿಭಾಗ ಮತ್ತು ಬೋಧನಾ ವಿಭಾಗದಲ್ಲಿ ಆಸಾಧಾರಣ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ನಗದು ಬಹುಮಾನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ. ಈ ಎರಡು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸಲಾಗುವುದು.2024 ರ ಪ್ರಶಸ್ತಿ ಸಮಾರಂಭವು ಮೇ.13ರ ಸೋಮವಾರದಂದು ನಡೆಯುತ್ತದೆ. ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಎರಡು ಪ್ರಶಸ್ತಿಗಳಿಗೆ ದತ್ತಿ ಸ್ಥಾಪಿಸಿರುವ ಡಾ.ಎನ್.ನಾರಾಯಣಪ್ಪ ಹಾಗೂ ಜಯಮ್ಮನವರನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಅಭಿನಂದಿಸಿದ್ದರು. ಡಾ.ಎನ್.ನಾರಾಯಣಪ್ಪನವರಿಗೆ ಈ ಸಮಾರಂಭಕ್ಕೆ ಸಂಬಂಧಪಟ್ಟ ಚೆಕ್ ಅನ್ನು ಹಸ್ತಾಂತರಿಸಲಾಯಿತು.