ಕನ್ನಡ ಪ್ರಭವಾರ್ತೆ ಚನ್ನರಾಯಪಟ್ಟಣ
ಮುನಿಶ್ರೀ ಸುಧೆಯಸಾಗರ ಮಹಾರಾಜರು, ಮುನಿಶ್ರೀ ಪ್ರಭಾಕರಸಾಗರ ಮಹಾರಾಜರು, ಆರ್ಯಿಕಾಶ್ರೀ ಶಿವಮತಿ ಮಾತಾಜಿ, ಆರ್ಯಿಕಾಶ್ರೀ ನಿರ್ಮಲಮತಿ ಮಾತಾಜಿ, ಕ್ಷುಲ್ಲಿಕಾಶ್ರೀ ವಿಶುದ್ಧಮತಿ ಮಾತಾಜಿ, ಕ್ಷುಲ್ಲಿಕಾಶ್ರೀ ಅಮರಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲಿಕಾಶ್ರೀ ಅಮೃತಜ್ಯೋತಿ ಮಾತಾಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶ್ರಾವಕ- ಶ್ರಾವಕಿಯರು ಮಂಗಳ ದ್ರವ್ಯಗಳನ್ನು ಹೊತ್ತು ಭಕ್ತಿಪೂರ್ವಕವಾಗಿ ಮೆರವಣಿಗೆ ನಡೆಸಿದರು. ಬಳಿಕ ಜೈನ ಪರಂಪರೆಯಂತೆ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರಿಗೆ ಹಾಗೂ ಸ್ವಾಮೀಜಿಯವರಿಗೆ ಅಘ್ರ್ಯ ಸಮರ್ಪಿಸಿ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ನಂತರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಈಶಾನ್ಯ ಮೂಲೆಯಲ್ಲಿ ಚಾತುರ್ಮಾಸ್ಯ ಕಳಶವನ್ನು ಪ್ರತಿಷ್ಠಾಪಿಸಲಾಯಿತು. ಶ್ರವಣಬೆಳಗೊಳ ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಪುರೋಹಿತರಾದ ನಂದಕುಮಾರ ಶಾಸ್ತ್ರಿ, ಪ್ರತಿಷ್ಠಾಚಾರ್ಯ ಜಿನೇಶ್ ಕುಮಾರ್ ಹಾಗೂ ಪುರೋಹಿತ ವರ್ಗವು ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು.
ಕಾರ್ಯಕ್ರಮದಲ್ಲಿ ತ್ಯಾಗಿಸೇವಾ ಸಮಿತಿಯ ನಿಹಾಲ್ ಚಂದ್ ಜೈನ್, ಶ್ರೀ ಮಠದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಚ್.ಪಿ. ಅಶೋಕ್ ಕುಮಾರ್, ಸದಸ್ಯರಾದ ಪೌದನ್ ಜೈನ್, ಕಾರ್ಯದರ್ಶಿ ಎಸ್. ಪಿ. ಮಹೇಶ್, ಹೆಚ್ಚುವರಿ ಕಾರ್ಯದರ್ಶಿ ಜಿ. ಡಿ. ಪಾರ್ಶ್ವನಾಥ್, ಶ್ರೀ ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ಎಸ್. ಪಿ. ಭಾನುಕುಮಾರ್, ಶ್ರೀ ಕೂಷ್ಮಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮೀ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರಾವಕ, ಶ್ರಾವಕಿಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಮೆರುಗು ತಂದರು.