ಹರಿಹರ ತಾಲೂಕು ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ: ಡಾ.ಪ್ರಭಾ

KannadaprabhaNewsNetwork | Published : Apr 3, 2024 1:36 AM

ಸಾರಾಂಶ

ಕೈಗಾರಿಕೆಗಳ ಸ್ಥಾಪನೆ ಮೂಲಕ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಲೋಕಸಭಾ ಕ್ಷೇತ್ರದ ಹರಿಹರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೂ ಇಲ್ಲಿನ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ದಾವಣಗೆರೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹರಿಹರದಲ್ಲಿ ಆಶ್ವಾಸನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಕೈಗಾರಿಕೆಗಳ ಸ್ಥಾಪನೆ ಮೂಲಕ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ದಾವಣಗೆರೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಆಶ್ವಾಸನೆ ನೀಡಿದರು.

ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಹರಿಹರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೂ ಇಲ್ಲಿನ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಹರಿಹರದಲ್ಲಿ ನನೆಗುದಿಗೆ ಬಿದ್ದಿರುವ ಭೈರನಪಾದ ಏತ ನೀರಾವರಿ ಯೋಜನೆಯ ಅನುಷ್ಠಾನ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು, ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ, ವೀಳ್ಯೆದೆಲೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟದ ವ್ಯವಸ್ಥೆ, ಐಟಿ, ಬಿಟಿ ಕಂಪನಿಗಳ ಆರಂಭ ಸೇರಿದಂತೆ ಹರಿಹರವನ್ನು ಮತ್ತೆ ಕೈಗಾರಿಕಾ ನಗರವಾಗಿ ರೂಪಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ವಿದೇಶ ಪ್ರವಾಸಕ್ಕೆ ಹೋಗಿಬಂದರೆ ಅವರ ಮೊಬೈಲ್‌ನಲ್ಲಿ ಕೇವಲ ಅಲ್ಲಿನ ಉತ್ತಮ ರಸ್ತೆ, ಚರಂಡಿ, ಬೀದಿದೀಪ, ಪಾರ್ಕುಗಳ ಚಿತ್ರಗಳೇ ಇರುತ್ತವೆ. ಅವರು ನಮ್ಮ ಜಿಲ್ಲೆಯನ್ನೂ ಆ ಸ್ಥರದಲ್ಲಿ ಅಭಿವೃದ್ಧಿಪಡಿಸಬೇಕೆಂಬ ಹಂಬಲ ಉಳ್ಳವರಾಗಿದ್ದಾರೆ ಎಂದರು.

ಮಾಜಿ ಸಚಿವರಾದ ಡಾ. ವೈ.ನಾಗಪ್ಪನವರು, ಎಸ್.ರಾಮಪ್ಪನವರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾನೂ ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಎಸ್.ಎಸ್.ಕೇ ರ್ ಟ್ರಸ್ಟ್‌ನಿಂದ ಅಸಂಖ್ಯಾತ ಬಡವರಿಗೆ ಅನುಕೂಲ ಮಾಡಿಕೊಡಲಾಗಿದೆ. ಉಚಿತ ಡಯಾಲಿಸಿಸ್, ನೇತ್ರ ತಪಾಸಣೆ ಸೇರಿದಂತೆ ಹತ್ತಾರು ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದರು.

ಪಕ್ಷದ ರಾಜ್ಯ ವಕ್ತಾರ ಡಿ.ಬಸವರಾಜ್ ಮಾತನಾಡಿ, ರಾಜ್ಯದ ೨೮ ಕ್ಷೇತ್ರಗಳ ಪೈಕಿ ೬ರಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಶಾಮನೂರು ಶಿವಶಂಕರಪ್ಪ ಕುಟುಂಬದ ಸದಸ್ಯರು ಸಚಿವರಾಗಿದ್ದಾಗಲೇ ದಾವಣಗೆರೆ ಜಿಲ್ಲೆ ಅಭಿವೃದ್ಧಿಯನ್ನು ಕಂಡಿದೆ. ನಗರದಲ್ಲಿ ೧೬ ಸಾವಿರ, ಜಿಲ್ಲೆಯಲ್ಲಿ ೬೦ ಸಾವಿರ ಆಶ್ರಯ ಮನೆ ನಿರ್ಮಿಸಿದ ಶ್ರೇಯಸ್ಸು ಶಾಮನೂರು ಕುಟುಂಬಕ್ಕೆ ಸಲ್ಲುತ್ತದೆ. ಬಿಜೆಪಿಯವರು ಸ್ವಂತ ಲಾಭಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ. ಜವಳಿ ಪಾರ್ಕಿಗೆಂದು ಮೀಸಲಾಗಿದ್ದ ೧೨ ಎಕರೆ ಜಮೀನನ್ನು ಆ ಪಕ್ಷದ ಕುಟುಂಬದ ಸದಸ್ಯರ ತೆಕ್ಕೆಗೆ ಬಂತು ಎಂದು ಆರೋಪಿಸಿದರು.

ಮುಖಂಡ ಎನ್.ಎಚ್. ಶ್ರೀನಿವಾಸ್ ಮಾತನಾಡಿ, ಕ್ಷೇತ್ರ ಅಭ್ಯರ್ಥಿ ಎಂದು ಘೋಷಣೆ ಆದಾಗಿನಿಂದ ಡಾ.ಪ್ರಭಾ ಅವರು ತಾಲೂಕಿನ ಡಿ.ಬಿ.ಕೆರೆ ಕಾಲುವೆಗಳಿಗೆ, ನದಿಗೆ ನೀರು ಹರಿಸುವ ವಿಚಾರವಾಗಿ ಶ್ರಮಿಸಿದ್ದಾರೆ. ಆದರೆ, ಅಧಿಕಾರದಲ್ಲಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಾವೂ ಹೋರಾಟ ಮಾಡಿದಾಗ ಎಥೆನಾಲ್ ಹಾಗೂ ಯೂರಿಯ ಕಾರ್ಖಾನೆ ಆರಂಭಿಸುತ್ತೇವೆಂದು ನೀಡಿದ ಭರವಸೆ ಸುಳ್ಳಾಗಿದೆ. ಡಾ.ಪ್ರಭಾ ಅವರು ಉತ್ತಮ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಮತದಾರರು ಬೆಂಬಲಿಸಬೇಕೆಂದರು.

ಸಭೆಯಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಎಚ್.ಬಿ.ಮಂಜಪ್ಪ, ಸಿ.ಎನ್.ಹುಲಿಗೇಶ್, ಎ.ಗೋವಿಂದ ರೆಡ್ಡಿ, ಎಂ.ನಾಗೇಂದ್ರಪ್ಪ, ಟಿ.ಜೆ.ಮುರುಗೇಶ್, ಡಿ.ಕುಮಾರ್, ಎಲ್.ಬಿ.ಹನುಮಂತಪ್ಪ, ಎಂ.ಬಿ.ಆಬಿದಲಿ, ಸಮರ್ಥ್ ಶಾಮನೂರು, ಎಚ್.ಕೆ.ಕೊಟ್ರಪ್ಪ, ಸನಾಉಲ್ಲಾ, ಮಲ್ಲೇಶ್, ಆಪ್ ಪಕ್ಷದ ಮುಖಂಡರಾದ ಗಣೇಶ್, ಬಸವರಾಜಪ್ಪ ಹಾಗೂ ಇತರರು ಮಾತನಾಡಿದರು.

- - -

-೨ಎಚ್‌ಆರ್‌ಆರ್೩:

ಹರಿಹರದ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.

Share this article