ಕನ್ನಡಪ್ರಭ ವಾರ್ತೆ ಉಡುಪಿ
ಭಾರತ ಚುನಾವಣಾ ಆಯೋಗವು ಮತದಾನ ದಿನದಂದು 16 ಅಗತ್ಯ ಸೇವೆಗಳ ಕರ್ತವ್ಯ ನಿರತರಿಗೆ ಮತ್ತು ಚುನಾವಣೆ ಕರ್ತವ್ಯನಿರತರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಈ ಸಿಬ್ಬಂದಿ ಅಂಚೆ ಮತದಾನ ಮಾಡಲು ಸೌಲಭ್ಯ ಕೇಂದ್ರಗಳನ್ನು ಆಯಾ ತರಬೇತಿ ಕೇಂದ್ರಗಳಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಅಂಚೆ ಮತದಾನ ಕೇಂದ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎ ಬ್ಲಾಕ್ ನೆಲಮಹಡಿಯ ಕೊಠಡಿ ಎ-102 ನಲ್ಲಿ 19 ರಿಂದ 21 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಅಂಚೆ ಮತದಾನ ಕೇಂದ್ರ (ಪೋಸ್ಟಲ್ ಬ್ಯಾಲೆಟ್ ವೋಟಿಂಗ್ ಸೆಂಟರ್)ವನ್ನು ಹಾಗೂ ಏಪ್ರಿಲ್ 21 ರಿಂದ 23 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ನಿರತ ಮತದಾರರು ಈ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು.
ವಿಧಾನಸಭಾ ಕ್ಷೇತ್ರವಾರು ಸೌಲಭ್ಯ ಕೇಂದ್ರಗಳು: ಕುಂದಾಪುರ ಕ್ಷೇತ್ರ - ಭಂಡಾರ್ಕಾರ್ಸ್ ಕಾಲೇಜು, ಕಾಪು ಕ್ಷೇತ್ರ - ದಂಡತೀರ್ಥ ಪಪೂ ಕಾಲೇಜು, ಕಾರ್ಕಳ ಕ್ಷೇತ್ರ - ಕ್ರೈಸ್ಟ್ ಕಿಂಗ್ ಪಪೂ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏ. 21 ರಿಂದ 22 ರ ಬೆಳಗ್ಗೆ 10 ರಿಂದ 5.30 ರವರೆಗೆ ಮತ ಚಲಾಯಿಸಬಹುದಾಗಿದೆ.ಶೃಂಗೇರಿ ಕ್ಷೇತ್ರ - ಕೊಪ್ಪದ ನಾಬರ್ಟ್ ಶಾಲೆ, ಮೂಡಿಗೆರೆ ಕ್ಷೇತ್ರ - ಡಿ.ಎಸ್.ಬಿ.ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು ಕ್ಷೇತ್ರ - ಎ.ಐ.ಟಿ ಕಾಲೇಜು ಹಾಗೂ ತರೀಕೆರೆ ಕ್ಷೇತ್ರ - ಸರ್ಕಾರಿ ಪದವಿ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏ. 21 ರಿಂದ 23 ರ ಬೆಳಗ್ಗೆ 10 ರಿಂದ 5.30 ರ ವರೆಗೆ ಮತ ಚಲಾಯಿಸಬಹುದಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.