ಪ್ರಗತಿ ಪರಿಶೀಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯದರ್ಶಿ ವಿಶ್ವನಾಥ್ ರೆಡ್ಡಿ । 9 ಸಬ್ ಸ್ಟೇಷನ್, 9 ಪಂಪಿಂಗ್ ಟವರ್ಸ್ ಪೂರ್ಣ
ಕನ್ನಡಪ್ರಭ ವಾರ್ತೆ ಸಕಲೇಶಪುರವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ ಎತ್ತಿನಹೊಳೆ ಕಾಮಗಾರಿಯ ಕೆಲಸಗಳು ಜೂನ್ 30 ರೊಳಗೆ ಪೂರ್ಣಗೊಳ್ಳಲಿದ್ದು, ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಸರ್ಕಾರ ನಿಗದಿ ಮಾಡಲಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ತಿಳಿಸಿದರು.
ಸಕಲೇಶಪುರದ ವಿವಿಧ ವಿಯರ್‌ಗಳಲ್ಲಿ ಶನಿವಾರ ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರ ಕಾರ್ಯದರ್ಶಿ ವಿಶ್ವನಾಥ್ ರೆಡ್ಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಎಂ.ಡಿ.ಸಣ್ಣಚಿತ್ತಯ್ಯ, ‘ಈಗಾಗಲೇ ಯೋಜನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 10 ರಂದು ವಿಯರ್ 1ನಲ್ಲಿ ಟ್ರಯಲ್ ರನ್‌ಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.‘9 ಸಬ್ ಸ್ಟೇಷನ್, 9 ಪಂಪಿಂಗ್ ಟವರ್ಸ್ ಕೆಲಸಗಳು ಮುಗಿಯುವ ಹಂತದಲ್ಲಿದೆ. ಇಂದು ನಾವು ಪರಿಶೀಲನೆ ನಡೆಸಿದ್ದು, ಡಿಸಿ 3ನಲ್ಲಿ ನೀರನ್ನು ಪಂಪ್ ಮಾಡಲು ನಮಗೆ ವಿದ್ಯುತ್ ಬೇಕು. ಅದಕ್ಕೆ ಕೆಪಿಟಿಸಿಎಲ್‌ನಿಂದ ಲೈನ್ ಚಾರ್ಜ್ ಮಾಡಬೇಕು. ಹೊಸದಾಗಿ ಪಿಟಿಸಿಸಿ ಅಪ್ರೂವಲ್ ಬೇಕಿತ್ತು. ಈ ವಿಚಾರವಾಗಿ ಇಂದು ಚರ್ಚೆ ನಡೆಸಿ ಅದನ್ನು ಬಗೆಹರಿಸಲಾಗಿದೆ. ಕೆಪಿಟಿಸಿಎಲ್ ಡಿಟಿ ಅವರು ಮೇ 29ರೊಳಗೆ ಸ್ಟೇಷನ್ ಚಾರ್ಜ್ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದಾದ ಬಳಿಕ ಪಂಪಿಂಗ್ ಮಿಷನ್, ಪಂಪಿಂಗ್ ಹೌಸ್‌ಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲು ಕನಿಷ್ಠ 15 ದಿನಗಳ ಗಡುವು ಬೇಕಿದೆ. ಜೂನ್ 15ರೊಳಗೆ ಡಿಸಿ 3 ಕಾರ್ಯಾಚರಣೆ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
‘ಈಗಾಗಲೇ ಕಾಡುಮನೆ ಭಾಗದ ವಿಯರ್ 4 ಹಾಗೂ ವಿಯರ್ 5ರಲ್ಲಿ ಯಶಸ್ವಿಯಾಗಿ ಟ್ರಯಲ್ ರನ್ ನಡೆಸಲಾಗಿದೆ. ಇನ್ನು ಕಪ್ಪಳ್ಳಿಯಲ್ಲಿರುವ ವಿಯರ್ 1ನಲ್ಲಿ ಜೂನ್ 10ರೊಳಗೆ ಎಲ್ಲ ರೀತಿಯ ಕೆಲಸಗಳು ಮುಗಿದಿರಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಪ್ರಮುಖವಾಗಿ ಈ ಯೋಜನೆಯಲ್ಲಿ ಶೇ.65ರಷ್ಟು ನೀರು ಇರುವುದು ವಿಯರ್ 1 ಹಾಗೂ ವಿಯರ್ 7ನಲ್ಲಿ. ವಿಯರ್ 7ನಿಂದ ವಿಯರ್ 1ಗೆ ನೀರು ಬರಲಿದೆ. ಆದರೆ, ವಿಯರ್ 7ನಲ್ಲಿ ಎಲ್‌ಸಿ (ಲೈನ್ ಕ್ಲಿಯರೆನ್ಸ್) ಬೇಕಿದೆ. ಜೂನ್ 3ರೊಳಗೆ ಎಲ್‌ಸಿ ಕ್ಲಿಯರ್ ಮಾಡುವಂತೆ ಗುತ್ತಿಗೆದಾರರಿಗೆ ಗುಡುವು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.ನೀರು ಎತ್ತುವಳಿ ಪ್ರದೇಶವಾದ 42 ಕಿ.ಮೀ.ವರೆಗೆ ಯಾವುದೇ ಭೂ ಸ್ವಾಧೀನದ ಸಮಸ್ಯೆ ಇಲ್ಲ. 42 ಕಿ.ಮೀ. ನಂತರದ ಭೂ ಸ್ವಾಧೀನದಲ್ಲಿ ಅರಣ್ಯ ಇಲಾಖೆ ಹಾಗೂ ಕೆಲ ರೈತರ ಸಮಸ್ಯೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸುತ್ತೇವೆ. ಒಟ್ಟಾರೆ ಜೂನ್ 30ರೊಳಗೆ ಎಲ್ಲ 9 ವಿಯರ್‌ಗಳಿಂದ ನೀರನ್ನು ಎತ್ತಲು ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿವೆ. ಆನಂತರ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು. ಬಳಿಕ ಸರ್ಕಾರ ಒಂದು ದಿನಾಂಕ ನಿಗದಿಗೊಳಿಸಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಿದೆ’ ಎಂದು ತಿಳಿಸಿದರು.
ಈ ವೇಳೆ ಮುಖ್ಯ ಎಂಜಿನಿಯರ್ ವರದಯ್ಯ, ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಎಇಇ ಪ್ರಮೋದ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಶಿಕುಮಾರ್, ಎಇಇಗಳಾದ ಶಶಿಧರ್ ನಾಯಕ್, ಸುಧೀಂದ್ರ, ವಿವೇಕ್, ಗುತ್ತಿಕೆದಾರರಾದ ಶ್ರೀನಿವಾಸ್, ದಯಾನಂದ್ ಇದ್ದರು.