ಭೀಮಣ್ಣ ಗಜಾಪುರ
ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ ನೂರಾರು ಸ್ಥಳೀಯ ಬಡ ಕಲಾವಿದರೂ ಮೂರು ತಿಂಗಳಿಂದ ಗೌರವಧನಕ್ಕಾಗಿ ಕಾಯುತ್ತಿದ್ದಾರೆ.
ತಾಲೂಕಿನ ಗುಡೇಕೋಟೆಯಲ್ಲಿ ಸರ್ಕಾರದಿಂದ ಕೋಟಿಗಟ್ಟಲೇ ಹಣ ಖರ್ಚು ಮಾಡಿ 3 ವರ್ಷಗಳಿಂದ ಒನಕೆ ಓಬವ್ವ ಉತ್ಸವ ಮಾಡಲಾಗುತ್ತಿದೆ. ಉತ್ಸವ ಆಯೋಜಿಸಲು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸ್ಥಳೀಯ ಕಲಾವಿದರ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿವೆ.ಫೆಬ್ರವರಿ ಮೊದಲ ವಾರದಲ್ಲಿ ನಡೆದ ಓಬವ್ವ ಉತ್ಸವದಲ್ಲಿ ತಮಗೆ ಬೇಕಾದ ಕಲಾವಿದರಿಗಷ್ಟೇ ಮಣೆ ಹಾಕಿದ್ದ ಉತ್ಸವದ ರೂವಾರಿಗಳು ಸ್ಥಳೀಯ ಬಡಕಲಾವಿದರನ್ನು ಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ತಾಲೂಕಿನ ಮೂಲೆ ಮೂಲೆಯಲ್ಲಿರುವ ಮರೆಯಾಗುತ್ತಿರುವ ಭಜನಾ ಕಲಾವಿದರು, ಸೋಬಾನೆ ಪದಗಳನ್ನು ಹೇಳುವವರು, ಜೋಕುಮಾರನ ಪದಗಳನ್ನು ಹಾಡುವವರು, ಗೋಂಧಲಿಗರ ಪದಗಳು, ಜೋಗಿಗಳ ಏಕತಾರಿ ಪದಗಳು, ಕುಟ್ಟುವ, ಬೀಸುವ ಪದಗಳಿಗೆ ಅವಕಾಶ ನೀಡುವ ಮೂಲಕ ಉತ್ಸವ ಸಾರ್ಥಕಗೊಳಿಸುವ ಜವಾಬ್ದಾರಿ ಸ್ಥಳೀಯ ಆಡಳಿತ, ಶಾಸಕರದ್ದಾಗಿತ್ತು. ಆದರೆ, ದೂರದ ಸೆಲಿಬ್ರೆಟಿಗಳಿಗೆ ಆದ್ಯತೆ ನೀಡಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಯಿತು ಎಂದು ಸ್ಥಳೀಯ ಕಲಾವಿದರು ಆಕ್ಷೇಪಿಸಿದ್ದರು. ಸೋಬಾನೆ ಪದಗಳನ್ನು ಹಾಡುವ ಮಹಿಳೆಗೆ ವೇದಿಕೆಯಲ್ಲಿ ಒಂದೇ ನಿಮಿಷ ಸಮಯ ನೀಡಿ, ಒತ್ತಾಯವಾಗಿ ವೇದಿಕೆಯಿಂದ ಕೆಳಗೆ ಕಳುಹಿಸಲಾಯಿತು. ಕೆಲವು ಸ್ಥಳೀಯ ಕಲಾವಿದರಿಗಂತೂ ಪ್ರಮಾಣಪತ್ರಗಳನ್ನಷ್ಟೇ ನೀಡಿ ಅವರ ಕಲೆಯ ಅನಾವರಣಕ್ಕೆ ಅವಕಾಶವೇ ನೀಡಲಿಲ್ಲ.
ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವಾಗ ಸಮಯ ಹೊಂದಾಣಿಕೆ ಕಷ್ಟ ನಿಜ. ಆದರೂ ಸೆಲೆಬ್ರಿಟಿಗಳಿಗೆ ಮೂರು ತಾಸುಗಟ್ಟಲೇ ನೀಡಲು ಅವರಿಗೆ ಸಮಯ ಇದೆ. ಅವರ ಸಮಯದಲ್ಲಿ ಒಂದು ತಾಸು ಕಡಿಮೆ ಮಾಡಿ ಸ್ಥಳೀಯ ಕಲಾವಿದರಿಗೆ ನೀಡಿದ್ದರೆ ಎಲ್ಲರಿಗೂ ಕಲೆಯನ್ನು ಪ್ರದರ್ಶಿಸಿಸಲು ಅವಕಾಶ ಸಿಗುತ್ತಿತ್ತು. ಆದರೆ, ಉತ್ಸವದಲ್ಲಿ ತಹಸೀಲ್ದಾರರನ್ನು ಕೇಳಿದರೆ ನಮಗೆ ಸಂಬಂಧ ಇಲ್ಲ, ಕನ್ನಡ ಮತ್ತು ಸಂಸ್ಕೃ ಇಲಾಖೆ ಕೇಳಿ ಅಂತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಬಡಕಲಾವಿದರ ಪೋನ್‌ಗೆ ಸಿಗುತ್ತಿರಲಿಲ್ಲ. ಹೀಗಾಗಿ, ಒನಕೆ ಓಬವ್ವಳ ಉತ್ಸವದಲ್ಲಿ ಕೆಲ ತಪ್ಪುಗಳು ನಡೆದವು. ಮುಂದಿನ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಸಿಗಬೇಕು, ಬಡಕಲಾವಿದರಿಗೆ ಬೇಗನೆ ಗೌರವಧನ ನೀಡಬೇಕು ಎಂದು ಕಲಾವಿದರು ಆಗ್ರಹಿಸಿದ್ದಾರೆ.