ದೀಪಾವಳಿ ಸಂಭ್ರಮಕ್ಕೆ ಹಾನಗಲ್ಲ ಪಟ್ಟಣದಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ನೀರು ಸರಬರಾಜು ಸಿಬ್ಬಂದಿಗೆ ೫ ತಿಂಗಳ ವೇತನವಿಲ್ಲ, ಸಿಬ್ಬಂದಿಯ ಮುಷ್ಕರದಿಂದಾಗಿ ನೀರು ಬಿಡಲು ಆಗಿಲ್ಲ ಎಂಬ ಸತ್ಯ ಹೊರ ಬಿದ್ದಿದ್ದು, ಹಲವೆಡೆ ಟ್ಯಾಂಕರ್ ಮೂಲಕ ನೀರು ಕೊಡುವ ಯತ್ನವೂ ವಿಫಲವಾಗಿದೆ.
ಹಾನಗಲ್ಲ: ದೀಪಾವಳಿ ಸಂಭ್ರಮಕ್ಕೆ ಹಾನಗಲ್ಲ ಪಟ್ಟಣದಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ನೀರು ಸರಬರಾಜು ಸಿಬ್ಬಂದಿಗೆ ೫ ತಿಂಗಳ ವೇತನವಿಲ್ಲ, ಸಿಬ್ಬಂದಿಯ ಮುಷ್ಕರದಿಂದಾಗಿ ನೀರು ಬಿಡಲು ಆಗಿಲ್ಲ ಎಂಬ ಸತ್ಯ ಹೊರ ಬಿದ್ದಿದ್ದು, ಹಲವೆಡೆ ಟ್ಯಾಂಕರ್ ಮೂಲಕ ನೀರು ಕೊಡುವ ಯತ್ನವೂ ವಿಫಲವಾಗಿದೆ.
೩೨ ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ ೫೦೭೦ ನಳಗಳಿವೆ. ಇನ್ನೂ ಸಾವಿರಾರು ಅನಧಿಕೃತ ನಳಗಳಿವೆ ಎಂಬ ಸುದ್ದಿ ಇದೆ. ನೀರು ಸರಬರಾಜಿಗಾಗಿ ೧೬ ಸಿಬ್ಬಂದಿ ಇದ್ದು ಇವರೆಲ್ಲ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಕಳೆದ ೫ ತಿಂಗಳಿನಿಂದ ಅವರ ವೇತನ ನೀಡಿಲ್ಲ. ಅದಕ್ಕಾಗಿ ನಾವು ಮುಷ್ಕರ ಹೂಡುತ್ತೇವೆ ಎಂದು ಸೂಚನೆ ನೀಡಿದರೂ ಕೂಡ ಪುರಸಭೆಗೆ ಆ ೧೬ ಸಿಬ್ಬಂದಿಯ ವೇತನ ನೀಡಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಅವರು ಮುಷ್ಕರದ ಹಾದಿ ಹಿಡಿದರು.
೮-೧೦ ದಿನಗಳಾದರೂ ನಳದಲ್ಲಿ ನೀರು ಬಿಟ್ಟಿಲ್ಲ ಎಂದು ಪುರಸಭೆಗೆ ಫೋನಾಯಿಸುತ್ತಲೇ ಇದ್ದರೂ ಕೂಡ ಪುರಸಭೆ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಲೇ ಇಲ್ಲ. ಇತ್ತ ಶುಕ್ರವಾರದಿಂದ ನೀರು ಸರಬರಾಜು ಸಿಬ್ಬಂದಿ ಮುಷ್ಕರ ಆರಂಭಿಸಿದರು.
ಮೌನ ಪ್ರತಿಭಟನೆ:ಯಾವುದೇ ಘೋಷಣೆ ಧರಣಿ ಇಲ್ಲದೆ ನೀರು ಬಿಡುವುದನ್ನು ನಿಲ್ಲಿಸಿ ಕಚೇರಿಗೆ ಬಂದು ತಮ್ಮ ಸಮಯ ಕಳೆಯಲು ಆರಂಭಿಸಿದರು. ಮುನ್ಸೂಚನೆ ನೀಡಿಯೂ ೫ ತಿಂಗಳ ವೇತನ ನೀಡದ ಕಾರಣದಿಂದಲೇ ಮುಷ್ಕರ ಆರಂಭಿಸಿರುವುದಾಗಿ ಖಡಾಖಂಡಿತವಾಗಿ ತಮ್ಮ ಅಹವಾಲು ತೋಡಿಕೊಂಡರು. ಪುರಸಭೆ ಮುಖ್ಯಾಧಿಕಾರಿಗಳು ಪಗಾರ ಕೊಡುತ್ತೇವೆ ಕೆಲಸ ಆರಂಭಿಸಿ ಎಂದು ಮನವಿ ಮಾಡಿದರು. ಆದರೆ ಮುಷ್ಕರ ನಿರತರು ಮಾತ್ರ ಪಗಾರ ಕೊಡಿ ಕೆಲಸ ಆರಂಭಿಸುತ್ತೇವೆ ಎಂದು ಪಟ್ಟು ಹಿಡಿದರು.
ಇಷ್ಟೆಲ್ಲ ಆದ ಮೇಲೆ ಸೋಮವಾರ ಸದ್ಯಕ್ಕೆ ಒಂದು ತಿಂಗಳ ಪಗಾರ ಕೊಡುತ್ತೇವೆ. ಒಂದು ವಾರದಲ್ಲಿ ಉಳಿದ ಪಗಾರ ಕೊಡುವ ಭರವಸೆ ನೀಡಿದ್ದರಿಂದ ಸೋಮವಾರ ಕುಡಿಯುವ ನೀರು ಸರಬರಾಜು ಸಿಬ್ಬಂದಿ ನೀರು ಬಿಡಲು ಆರಂಭಿಸಿದರು. ಅದರೆ ಇಡೀ ಊರಿಗೆ ನೀರು ಬಿಡಲಾಗದೆ ಊರಿನ ಜನ ಹಬ್ಬದ ದಿನವೇ ನೀರಿಲ್ಲ ಎಂದು ಪುರಸಭೆಗೆ ಹಿಡಿಶಾಪ ಹಾಕುತ್ತ ಅಲ್ಲಲ್ಲಿ ನೀರು ಬೇಡಿ ತಂದು ಅಮಾವಾಸ್ಯೆ ಮಾಡುವ ದೃಶ್ಯ ಗಮನ ಸೆಳೆದವು.
ಹಬ್ಬ ನಿರ್ಲಕ್ಷ್ಯ: ಒಂದೆರಡು ದಿನಗಳಲ್ಲಿ ಹಿಂದುಗಳ ದೊಡ್ಡ ಹಬ್ಬ ದೀಪಾವಳಿ ಇದ್ದರೂ ನೀರು ಸರಬರಾಜು ಸಿಬ್ಬಂದಿಯ ಬೇಡಿಕೆ ಈಡೇರಿಸಲು ಮುಂದಾಗದೆ, ಅದಕ್ಕೆ ಮಣಿಯದೆ ಪುರಸಭೆ ಅಧಿಕಾರಿಗಳು ಇಡೀ ಹಬ್ಬದಂದೇ ಜನರು ಪರದಾಡುವಂತೆ ಮಾಡಿರುವುದು ಜನರಲ್ಲಿ ಭಾರೀ ಬೇಸರಕ್ಕೆ ಕಾರಣವಾಗಿದೆ. ಒಂದೆರಡು ದಿನಗಳಲ್ಲಿ ಹಬ್ಬ ಇರುವುದನ್ನು ಗಮನಿಸಿಯಾದರೂ ಅವರ ಬೇಡಿಕೆ ಈಡೇರಿಸಿ ನೀರು ಹರಿಸುವ ಕೆಲಸಕ್ಕೆ ಆತಂಕವಿಲ್ಲದಂತೆ ನೋಡಿಕೊಳ್ಳಬೇಕಾಗಿತ್ತು ಎಂಬ ಚರ್ಚೆ ಸಾರ್ವಜನಿಕರಲ್ಲಿದೆ. ಆದರೆ ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ನೀರು ಕೊಡಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ವಿನಃ, ನೀರು ಕೊಡುವಲ್ಲಿ ಮಾತ್ರ ವಿಫಲವಾಗಿದ್ದಾರೆ.
೧ ಕೋಟಿ ಟ್ಯಾಕ್ಸ್: ಹಾನಗಲ್ಲ ಪಟ್ಟಣದಲ್ಲಿ ಸಾರ್ವಜನಿಕರಿಂದ ಬರಬೇಕಾದ ಟ್ಯಾಕ್ಸ ೧ ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರಿಂದ ಟ್ಯಾಕ್ಸ್ ವಸೂಲಿ ಆಗದಿರುವುದೇ ಸಿಬ್ಬಂದಿಗೆ ವೇತನ ನೀಡುವಲ್ಲಿ ವಿಳಂಬಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಏನೇ ಆದರೂ ಹಿಂದುಗಳ ಅತ್ಯಂತ ದೊಡ್ಡ ಹಬ್ಬ ದೀಪಾವಳಿಗೆ ನೀರಿನ ಕೊರತೆ ಮಾತ್ರ ಎಂದೆಂದೂ ನೆನಪಿಸುವಂತಹ ಅನಾನುಕೂಲವಾಗಿರುವುದು ಮಾತ್ರ ಸತ್ಯ. ಪುರಸಭೆ ಅಧಿಕಾರಿಗಳನ್ನು ಹೊರತು ಪಡಿಸಿ, ಮೇಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂತಹ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ, ಬಿಎಸ್ಎನ್ಎಲ್ ಕಂಪನಿಯವರು ಪಟ್ಟಣದಲ್ಲಿ ರಸ್ತೆ ಅಗೆದು ಅದರಲ್ಲಿ ಪುರಸಭೆ ಕುಡಿಯುವ ನೀರು ಸರಬರಾಜು ಪೈಪಗಳು ಒಡೆದಿವೆ ಅವನ್ನು ದುರಸ್ತಿ ಮಾಡುವ ಗೊಡವೆಗೆ ಅವರು ಹೋಗಿಲ್ಲ. ಇನ್ನೊಂದೆಡೆ ೧೬ ಸಿಬ್ಬಂದಿ ಮುಷ್ಕರ ಹೂಡಿದ್ದರಿಂದ ನೀರು ಬಿಡಲು ವ್ಯತ್ಯಯವಾಗಿದೆ ಎಂದು ಕುಡಿಯುವ ನೀರು ಸರಬರಾಜು ವ್ಯವಸ್ಥೆ ನಿರ್ವಾಹಕ ಎ.ಎ. ಉಪ್ಪಿನ ಹೇಳಿದರು.
ನಮ್ಮ ಶ್ರದ್ಧೆಯ ದೀಪಾವಳಿಗೆ ನೀರಿನ ಸರಬರಾಜು ವಿಫಲವಾಗಿ ಪರದಾಡುವಂತಾಯಿತು. ಹಬ್ಬ ಇದ್ದಾಗಲೂ ಮುಂಜಾಗ್ರತೆ ವಹಿಸದೆ ಇರುವುದು ಖೇದದ ಸಂಗತಿ. ನೀರಿಗಾಗಿ ಎಷ್ಟೇ ಫೋನು ಮಾಡಿದರು ಅಧಿಕಾರಿಗಳು ಸಿಬ್ಬಂದಿ ಫೋನು ತೆಗೆಯಲಿಲ್ಲ. ನೀರಿನ ಸ್ಥಿತಿ ದೇವರೇ ಗತಿ ಎನ್ನುವಂತಾಯಿತು. ನೀರಿಲ್ಲದೆ ದೀಪಾವಳಿ ಆಚರಿಸುವಂತಾಯಿತು ಎಂದು ಸಾರ್ವಜನಿಕ ಕುಮಾರಸ್ವಾಮಿ ಅಡವಿಸ್ವಾಮಿಮಠ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.