ರಾಣಿಬೆನ್ನೂರು ಶಾಲಾ ರಸ್ತೆಯಲ್ಲೇ ಸರಣಿ ವಾಮಾಚಾರ: ಜನರಲ್ಲಿ ಆತಂಕ

KannadaprabhaNewsNetwork |  
Published : Nov 10, 2026, 01:00 AM IST
ರಾಣಿಬೆನ್ನೂರು ನಗರಸಭಾ ಕ್ರೀಡಾಂಗಣದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರಿನಲ್ಲಿ ವಾಮಾಚಾರ ಮಾಡಿರುವುದು | Kannada Prabha

ಸಾರಾಂಶ

ಸ್ಥಳೀಯ ನಗರಸಭಾ ಕ್ರೀಡಾಂಗಣದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7 ಎದುರಿನಲ್ಲಿ ಭಾನುವಾರ ತಡರಾತ್ರಿ ವಾಮಾಚಾರ ಪ್ರಕರಣ ಜರುಗಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.

ರಾಣಿಬೆನ್ನೂರು: ಸ್ಥಳೀಯ ನಗರಸಭಾ ಕ್ರೀಡಾಂಗಣದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7 ಎದುರಿನಲ್ಲಿ ಭಾನುವಾರ ತಡರಾತ್ರಿ ವಾಮಾಚಾರ ಪ್ರಕರಣ ಜರುಗಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.

ಈ ಪ್ರದೇಶದಲ್ಲಿ ಒಟ್ಟು ಮೂರು ಸರ್ಕಾರಿ (1, 7, 8) ಶಾಲೆಗಳಿದ್ದು ಅವುಗಳಿಗೆ ಒಂದೇ ರಸ್ತೆಯಿದ್ದು, ನೂರಾರು ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಈ ಹಿಂದೆ ಎರಡು ಬಾರಿ ವಾಮಾಚಾರ ನಡೆಸಲಾಗಿತ್ತು. ಒಂದು ಬಾರಿ ಕೋಳಿ, ಮತ್ತೊಂದು ಬಾರಿ ಬಾವಲಿ ಇದೀಗ ಪುನಃ ಕೋಳಿ ಬಲಿ ಮಾಡಿರುವುದು ತೀವ್ರ ಜಿಜ್ಞಾಸೆಗೆ ಕಾರಣವಾಗಿದೆ. ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ಕೋಳಿ ಕಳೇಬರ ಹಾಗೂ ಪೂಜಾ ಸಾಮಗ್ರಿಗಳ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಶಾಲಾ ಮಕ್ಕಳು ಸಂಚರಿಸುವ ರಸ್ತೆಯಲ್ಲಿ ಈ ರೀತಿ ವಾಮಾಚಾರ ಪ್ರಕರಣಗಳು ಪದೇ ಪದೆ ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ಇಂತಹ ಘಟನೆಗಳು ಮುಗ್ಧ ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರುವ ಆತಂಕ ಪೋಷಕರನ್ನು ಕಾಡುತ್ತಿದೆ. ಅಲ್ಲದೆ, ಕೊಳೆತ ಕಳೇಬರದಿಂದ ನೈರ್ಮಲ್ಯ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ.

ನಗರದ ಮಧ್ಯಭಾಗದಲ್ಲಿಯೇ ಪದೇಪದೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಕೃತ್ಯ ಎಸಗುವವರನ್ನು ಪತ್ತೆಹಚ್ಚದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಮಕ್ಕಳ ಸಂಚಾರವಿರುವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದಿರುವುದು ಕಿಡಿಗೇಡಿಗಳಿಗೆ ಅನುಕೂಲವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಕ್ರಮಕ್ಕೆ ಆಗ್ರಹ:ನಗರದ ಮಧ್ಯಭಾಗದಲ್ಲಿ ಇಂತಹ ಕೃತ್ಯಗಳ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವವರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತಕ್ಷಣ ಮುಂದಾಗಬೇಕು. ಹಿಂದಿನ ಘಟನೆಗಳನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಶಾಲೆಗಳ ಮುಂಭಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಶಾಲೆ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕ ಆಗ್ರಹಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ