ಕುಮಟಾ: ತೆಂಕು ಮತ್ತು ಬಡಗು ತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಕಲಾವಿದರ ಅದ್ಭುತ ಕಲಾಪ್ರದರ್ಶನ, ಮೂರು ವೈವಿಧ್ಯಮಯ ಯಕ್ಷಗಾನ ಪ್ರಸಂಗಗಳ ಮನಮೋಹಕ ಪ್ರದರ್ಶನ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲ ಅವರಿಗೆ ಯಕ್ಷೋತ್ಸವ ಪ್ರಶಸ್ತಿ ಪ್ರದಾನ. ಇವೆಲ್ಲದಕ್ಕೂ ಸಾಕ್ಷಿಯಾದ ಕತಗಾಲ ಯಕ್ಷೋತ್ಸವ, ಯಕ್ಷಪ್ರೇಮಿಗಳ ಮನಸೂರೆಗೊಂಡಿತು. ತೆಂಕು ಮತ್ತು ಬಡಗು ತಿಟ್ಟುಗಳ 56 ಹೆಸರಾಂತ ಕಲಾವಿದರು ಭಾನುವಾರ ಒಂದೇ ವೇದಿಕೆಯಲ್ಲಿ ಸಮಾಗಮಗೊಂಡು ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಎರಡೂ ತಿಟ್ಟುಗಳ ವೈಶಿಷ್ಟ್ಯಪೂರ್ಣ ನೃತ್ಯ, ವೇಷಭೂಷಣ, ಮಾತುಗಾರಿಕೆ, ಹಿಮ್ಮೇಳ ಹಾಗೂ ಅಭಿನಯದ ಸೊಬಗು ಪ್ರೇಕ್ಷಕರನ್ನು ಯಕ್ಷಲೋಕದಲ್ಲಿ ತೇಲಾಡಿಸಿತು. ಮಧುರಾ ಮಹೀಂದ್ರ, ಮಹಿಷಾಸುರ ಮರ್ಧಿನಿ ಹಾಗೂ ಕದಂಬ ಕೌಶಿಕೆ ಈ ಮೂರೂ ಯಕ್ಷಗಾನ ಪ್ರಸಂಗಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು.
ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಭಾಗವತಿಕೆ, ಕಲಾ ಸೇವೆ ಹಾಗೂ ಕಲಾವಿದರ ಕ್ಷೇಮಾಭ್ಯುದಯಕ್ಕಾಗಿ ದುಡಿಯುತ್ತಿರುವ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲ ಅವರೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಘಟಕರಾದ ಭಂಡಿವಾಳದ ವಿನಾಯಕ ಭಟ್ ಹಾಗೂ ಮಂಜುನಾಥ ಭಟ್ ಸಹೋದರರು, ರಾಜೇಂದ್ರ ಭಟ್, ಅಶೋಕ ಭಟ್, ಗಜಾನನ ಪೈ, ದೇವು ಗೌಡ ಮತ್ತಿತರ ಗಣ್ಯರು ಸತೀಶ ಶೆಟ್ಟಿ ಪಟ್ಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಿದರು.ಪ್ರಶಸ್ತಿ ಸ್ವೀಕರಿಸಿದ ಸತೀಶ ಶೆಟ್ಟಿ, ಕಲಾವಿದರಿಗೆ ಆಸರೆಯಾಗಿ ನಾನು ನಿಲ್ಲಲು ಕಲಾಪ್ರೇಮಿಗಳ ಕೊಡುಗೆ ದೊಡ್ಡದು. ನನ್ನ ಮೂಲಕ ನೀವು ನೆರವಾಗಿದ್ದೀರಿ. ಯಕ್ಷಗಾನ, ನಾಟಕ ಕಲಾವಿದರು, ದೈವಾರಾಧನೆಯಲ್ಲಿ ತೊಡಗಿಕೊಂಡವರಿಗೂ ನಾವು ಸಹಾಯಹಸ್ತ ಚಾಚಿದ್ದೇವೆ. ಕತಗಾಲ ಯಕ್ಷೋತ್ಸವ ಯಶಸ್ವಿಯಾಗಿದೆ ಎಂದು ತಿಳಿಸಿದರು. 2 ಸಾವಿರ ಪ್ರೇಕ್ಷಕರು