ಶಿಕ್ಷಣ ಸಚಿವರಿಗೇ ಕನ್ನಡ ಬರಲ್ಲ: ಬಿವೈವಿ

KannadaprabhaNewsNetwork |  
Published : May 26, 2024, 01:34 AM ISTUpdated : May 26, 2024, 08:47 AM IST
Vijayendra

ಸಾರಾಂಶ

ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಣ ಕ್ಷೇತ್ರದ ಕಲುಷಿತಗೊಂಡಿದೆ. ಶಿಕ್ಷಣ ಸಚಿವರಿಗೇ ಸರಿಯಾಗಿ ಕನ್ನಡ ಓದಲು, ಬರೆಯಲು ಬರಲ್ಲವೆಂದರೆ ಶಿಕ್ಷಣ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ಅದೆಷ್ಟು ಗಂಭೀರವಾಗಿ ಯೋಚನೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

 ದಾವಣಗೆರೆ/ತುಮಕೂರು/ಚಿತ್ರದುರ್ಗ :  ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಣ ಕ್ಷೇತ್ರದ ಕಲುಷಿತಗೊಂಡಿದೆ. ಶಿಕ್ಷಣ ಸಚಿವರಿಗೇ ಸರಿಯಾಗಿ ಕನ್ನಡ ಓದಲು, ಬರೆಯಲು ಬರಲ್ಲವೆಂದರೆ ಶಿಕ್ಷಣ ಕ್ಷೇತ್ರದ ಬಗ್ಗೆ ರಾಜ್ಯ ಸರ್ಕಾರ ಅದೆಷ್ಟು ಗಂಭೀರವಾಗಿ ಯೋಚನೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಶನಿವಾರ ದಾವಣಗೆರೆ, ತುಮಕೂರು, ಚಿತ್ರದುರ್ಗದಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು ರಾಜ್ಯ ಸರ್ಕಾರ ವಿರುದ್ಧ ತೀವ್ರ ಹರಿಹಾಯ್ದರು.ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಿರುದ್ಯೋಗ ನಿವಾರಣೆ ಮತ್ತು ಕೌಶಲ್ಯಪೂರ್ಣ ಶಿಕ್ಷಣ ನೀಡುವ ಉದ್ದೇಶದಿಂದ ಜಾರಿಗೊಳಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಬದಿಗೆ ಸರಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಎಸ್ಇಪಿ ತರಲು ಪ್ರಯತ್ನಿಸಿದೆ. 

ಈ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.ವಿಧಾನ ಪರಿಷತ್‌ ಚುನಾವಣೆ ಪ್ರಚಾರಕ್ಕೆಂದು ದಾವಣಗೆರೆಯ ಶಾಲೆಯೊಂದಕ್ಕೆ ಪ್ರಚಾರಕ್ಕೆ ಹೋಗಿದ್ದ ವೇಳೆ ಶಿಕ್ಷಕರ ಜೊತೆಗೆ ಚರ್ಚಿಸಿದೆ. ಅಲ್ಲಿ ಓರ್ವ ಶಿಕ್ಷಕರಂತು ಲೋಕಸಭೆ, ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಶಿಕ್ಷಣ ಸಚಿವರನ್ನು ಬದಲಾಯಿಸಲು ರಾಜ್ಯವ್ಯಾಪಿ ಹೋರಾಟ ರೂಪಿಸುವಂತೆ ಮನವಿ ಮಾಡಿದರು ಎಂದ ವಿಜಯೇಂದ್ರ, ಬಹುಶಃ ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಬರುತ್ತದೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಶಿಕ್ಷಣ ಕ್ರಾಂತಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ನಮ್ಮ ಶಿಕ್ಷಣ ಸಚಿವರಿಗೇ ಸರಿಯಾಗಿ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತ್ತು. ಯಡಿಯೂರಪ್ಪ ಕೇವಲ ರೈತ ನಾಯಕರಾಗಿರಲಿಲ್ಲ, ಶಿಕ್ಷಕರೂ ಗೌರವಿಸುವ ಕೆಲಸ ಮಾಡುತ್ತಿದ್ದರು ಎಂದರು.

ನಾಲ್ವರು ನಾರಾಯಣಸ್ವಾಮಿ ಕಣಕ್ಕೆ: ಬಿವೈವಿ ಕಿಡಿಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಾರಾಯಣಸ್ವಾಮಿ ಎಂಬ ಹೆಸರಿನ ನಾಲ್ವರನ್ನು ನಾಮಪತ್ರ ಸಲ್ಲಿಕೆಗೆ ಸೂಚಿಸುವ ಮೂಲಕ ಎನ್‌ಡಿಎ ಅಭ್ಯರ್ಥಿಯನ್ನು ಕುತಂತ್ರದಿಂದ ಸೋಲಿಸಲು ಕಾಂಗ್ರೆಸ್ ಹೊರಟಿದೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ತುಮಕೂರಿನ ಸ್ನೇಹ ಸಂಗಮ ಸಭಾ ಭವನದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಕರ ಧ್ವನಿಯಾಗಿ ನಿಮ್ಮೆಲ್ಲರ ಪರ ಸದನದ ಹೊರಗಡೆ ಹಾಗೂ ಒಳಗಡೆ ನಾರಾಯಣಸ್ವಾಮಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆತಂಕಕ್ಕೆ ಕಾರಣವಾಗಿದ್ದು, ಈ ಬಾರಿ ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಕುತಂತ್ರ ಹೂಡಿದ್ದಾರೆ ಎಂದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ