ಅಡಕೆ ಕದ್ದರೂ ಕಳ್ಳ: ತಪ್ಪಿತಸ್ಥರ ಮೇಲೆ ಕ್ರಮ: ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್

KannadaprabhaNewsNetwork |  
Published : Jan 07, 2026, 01:30 AM IST
ಫೋಟೋ- ಲೋಕಾ 1, ಲೋಕಾ 2 ಮತ್ತು ಲೋಕಾ 3 | Kannada Prabha

ಸಾರಾಂಶ

ಕಾನೂನಿನಲ್ಲಿ ಸರ್ಕಾರಿ ನೌಕರರ ಪ್ರತಿ ತಪ್ಪಿಗೂ ತನ್ನದೇ ಆದ ಶಿಕ್ಷೆ ಇದೆ, ಎಲ್ಲಾ ಕಳ್ಳರನ್ನು ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ. ‘ಆನೆ ಕದ್ದರು ಕಳ್ಳ-ಅಡಕೆ ಕದ್ದರೂ ಕಳ್ಳ’ ಆಗುವ ಕಾರಣಕ್ಕೆ ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಾನೂನಿನಲ್ಲಿ ಸರ್ಕಾರಿ ನೌಕರರ ಪ್ರತಿ ತಪ್ಪಿಗೂ ತನ್ನದೇ ಆದ ಶಿಕ್ಷೆ ಇದೆ, ಎಲ್ಲಾ ಕಳ್ಳರನ್ನು ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ. ‘ಆನೆ ಕದ್ದರು ಕಳ್ಳ-ಅಡಕೆ ಕದ್ದರೂ ಕಳ್ಳ’ ಆಗುವ ಕಾರಣಕ್ಕೆ ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಕಲಬುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ’ ಉದ್ದೇಶಿಸಿ ಮಾತನಾಡಿ, ಲೋಕಾಯುಕ್ತ ಬೆಂಗಳೂರಿನ ಕೇಂದ್ರ ಕಚೇರಿಯಿಂದ ರಾಜ್ಯದಲ್ಲಿ ವಲಯವಾರು ನೇರ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಜ.2ರಿಂದ ಇಂದಿನವರೆಗೆ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಗಳಲ್ಲಿ ವಿವಿಧ ಇಲಾಖೆಗಳ ತಪಾಸಣೆ ಮಾಡಲಾಗಿದೆ ಎಂದರು.

ಇಬ್ಬರೂ ನ್ಯಾಯಾಧೀಶರನ್ನು ಒಳಗೊಂಡಂತೆ ಒಬ್ಬ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, 5 ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, 16 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮತ್ತು 26 ಪೊಲೀಸ್ ಸಿಬ್ಬಂದಿ ಒಳಗೊಂಡ ಒಟ್ಟು 48 ಅಧಿಕಾರಿಗಳನ್ನು 8 ತಂಡಗಳನ್ನಾಗಿ ವಿಂಗಡಿಸಿ ಒಟ್ಟು 5 ದಿನ ಈ ನಾಲ್ಕು ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ವಿವಿಧ ಸೇವೆ ನೀಡುವ 2 ತಾಲೂಕು ಕಚೇರಿಗಳು, 2 ನೊಂದಣಾಧಿಕಾರಿಗಳ ಕಚೇರಿ, 105 ವಿವಿಧ ವಿದ್ಯಾರ್ಥಿ ವಸತಿ ನಿಲಯಗಳು, 5 ವಸತಿ ಸಹಿತ ಶಾಲೆಗಳು, 2 ಶಿಕ್ಷಣಾಧಿಕಾರಿಗಳ ಕಚೇರಿ, 2 ಅಗ್ನಿಶಾಮಕ ಕಚೇರಿ, 2 ರಸ್ತೆ ಸಾರಿಗೆ ಕಚೇರಿ ಸೇರಿದಂತೆ 7 ವಿವಿಧ ಸ್ಥಳೀಯ ಕಾರ್ಪೊರೇಷನ್, ವಿಭಾಗೀಯ ಅಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕೆಲವು ಕಚೇರಿಗಳ ತಪಾಸಣೆಯನ್ನು ನಡೆಸಲಾಗಿದೆ. ಇಂದು ಮತ್ತು ನಾಳೆ ಸಹ ತಪಾಸಣೆ ಮುಂದುವರಿಯಲಿದೆ ಎಂದರು.

ಕಳೆದ ನಾಲ್ಕು ದಿನಗಳಿಂದ 105 ವಿದ್ಯಾರ್ಥಿ ವಸತಿನಿಲಯ, 4 ವಸತಿ ಶಾಲೆಗಳಿಗೆ ಭೇಟಿ ನೀಡಲಾಗಿದ್ದು, ನಗರದ ಗುಲಬರ್ಗಾ ವಿಶ್ವವಿದ್ಯಾನಿಲಯದ ಅಲ್ಪಸಂಖ್ಯಾತರ ಮಹಿಳಾ ವಸತಿ ನಿಲಯ ಮಾತ್ರ ಉತ್ತಮವಾಗಿದ್ದು, ಉಳಿದಂತೆ ಎಲ್ಲಾ ವಸತಿ ನಿಲಯಗಳ ಸ್ಥಿತಿ ಶೋಚನಿಯವಾಗಿದೆ. ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ನೀಡಬೇಕಾದ ಮೂಲಭೂತವಾದ ಆಹಾರ, ಆರೋಗ್ಯ, ಸ್ವಚ್ಚತೆ ಮತ್ತು ಶಿಕ್ಷಣ ನೀಡಲು ನಪಾಸಾದ ಸಂಬಂಧಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಕರ್ನಾಟಕದ ಕಲ್ಯಾಣಕ್ಕಾಗಿ ಕೆಲಸ ಮಾಡಿ:

ಕಳೆದ ನಾಲ್ಕು ದಿನಗಳ ತಪಾಸಣಾ ವರದಿ ಹಾಗೂ ತಂಡಗಳು ನೀಡಿದ ಮಾಹಿತಿ ಈ ಅತ್ಯಂತ ಅತೃಪ್ತಿಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಈ ಭಾಗ ಅತ್ಯಂತ ಹಿಂದುಳಿಯಲು ಇಲ್ಲಿನ ಸರ್ಕಾರಿ ನೌಕರರೇ ಕಾರಣ, ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಗಳನ್ನು ಭಾಗದ ಕಲ್ಯಾಣಕ್ಕಾಗಿ ವ್ಯಯ ಮಾಡುತ್ತಿದ್ದರು ಸಹ ಅದು ಸಾರ್ವಜನಿಕರಿಗೆ ಸರಿಯಾಗಿ ಮುಟ್ಟದಿರುವುದು ದುರಂತ.

ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಮನೀಶ ಖರ್ಬೆಕರ್, ಕಾರ್ಯದರ್ಶಿ ಶ್ರೀನಾಥ ಕೆ ಹಾಗೂ ಅಪರ ನಿಬಂಧಕ ವಿಜಯಾನಂದ ಅವರು ಕಳೆದ ನಾಲ್ಕು ದಿನಗಳ ತಪಾಸಣೆ ಸಮಯದಲ್ಲಿ ಕಂಡು ಬಂದ ವಿಶೇಷ ಪ್ರಕರಣಗಳು, ದಾಖಲಿಸಿರುವ ಮೊಕದ್ದಮೆಗಳ ಕುರಿತು ಸಭೆಗೆ ವಿವರಿಸಿದರು.

ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಎಸ್.ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಭಂವರ್ ಸಿಂಗ್ ಮೀನಾ, ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ