ಅರ್ಜಿ ಸಲ್ಲಿಸದಿದ್ರೂ ಸರ್ಕಾರದಿಂದಲೇ ಪೌತಿ ಖಾತೆ

KannadaprabhaNewsNetwork |  
Published : Aug 05, 2025, 12:30 AM ISTUpdated : Aug 05, 2025, 10:13 AM IST
Krishna byregowda

ಸಾರಾಂಶ

ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರೆಯುತ್ತಿದೆ. ಇದರಲ್ಲಿ ವಾರಸುದಾರರ ನಡುವೆ ತಕರಾರಿಲ್ಲದ ಎಲ್ಲವನ್ನೂ ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್‌ ಒಳಗಾಗಿ ವಾರಸುದಾರರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

 ಬೆಂಗಳೂರು :  ರಾಜ್ಯದಲ್ಲಿ 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿ ಮುಂದುವರೆಯುತ್ತಿದೆ. ಇದರಲ್ಲಿ ವಾರಸುದಾರರ ನಡುವೆ ತಕರಾರಿಲ್ಲದ ಎಲ್ಲವನ್ನೂ ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್‌ ಒಳಗಾಗಿ ವಾರಸುದಾರರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ ಹಾಗೂ ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಹೀಗಾಗಿ ಜನರಿಂದ ಅರ್ಜಿ ಕರೆಯದೆ ನಾವೇ ರೈತರ ಮನೆ ಬಾಗಿಲಿಗೆ ತೆರಳಿ ಅಭಿಯಾನ ಮಾದರಿಯಲ್ಲಿ ಪೌತಿ ಖಾತೆ ಮಾಡಿಕೊಡುತ್ತಿದ್ದೇವೆ. ಪೌತಿ ಆಂದೋಲನದಲ್ಲಿ ಪ್ರಗತಿ ಸಾಧಿಸುವ ವಿಎಗಳಿಗೆ ಪ್ರತಿ ಪೌತಿ ಪ್ರಕರಣಕ್ಕೆ 6 ರುಪಾಯಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದರು.

4,250 ಅರ್ಹ ದಾಖಲೆ ರಹಿತ ವಸತಿಪ್ರದೇಶಗ‍ಳು ಇನ್ನು ಕಂದಾಯ ಗ್ರಾಮ

‘ರಾಜ್ಯದಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿಯ ಸೂರಿನ ಹಕ್ಕು ನೀಡಲು ಇಲಾಖೆ ಸ್ವಯಂ ಪ್ರೇರಿತವಾಗಿ ಮುಂದಾಗಿದೆ. ಡಿಸೆಂಬರ್‌ ಒಳಗೆ 4,250 ಅರ್ಹ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು’ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.

ಈಗಾಗಲೇ ಕಳೆದ ಮೇ ತಿಂಗಳಲ್ಲಿ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಗ್ರಾಮಗಳ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲಾಗುವುದು. ಇಲ್ಲಿನ 1.62 ಲಕ್ಷ ಕುಟುಂಬಗಳಿಗೆ ಇ-ಖಾತಾ ನೋಂದಣಿ ಮಾಡಿಸಿದ ಪಕ್ಕಾ ಹಕ್ಕುಪತ್ರ ನೀಡುವ ಗುರಿ ಡಿಸೆಂಬರ್‌ ಒಳಗೆ ಸಾಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಒಟ್ಟು 2.73 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದಂತಾಗಲಿದೆ ಎಂದರು.

ಹಾಡಿ, ಹಟ್ಟಿ, ತಾಂಡಾ, ಮಜರೆ ಗ್ರಾಮಗಳಲ್ಲಿ ವಾಸಿಸುತ್ತಿರುವವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಾಕಷ್ಟು ಹಿಂದುಳಿದವರು. ವಿವಿಧ ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳ ಜಾತಿಗಳ ಜನರೂ ದಾಖಲೆ ರಹಿತ ವಸತಿ ಪ್ರದೇಶದಲ್ಲಿ ವಾಸಿಸುತ್ತಿರುತ್ತಾರೆ. ಅಂತಹ 4,250 ವಸತಿ ಪ್ರದೇಶಗಳನ್ನು ಗುರುತಿಸಿದ್ದು, ಅಷ್ಟೂ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗುವುದು. ತನ್ಮೂಲಕ ನೆಮ್ಮದಿಯ ಸೂರಿನ ಹಕ್ಕು ನೀಡಲಾಗುವುದು.

ಅಷ್ಟೇ ಅಲ್ಲ, ಅಷ್ಟೂ ಮನೆಗಳಿಗೆ ಹಕ್ಕು ಪತ್ರ ನೀಡಲಾಗುವುದು. ತಕ್ಷಣ ತನ್ನಿಂತಾನೇ ಇ-ಸ್ವತ್ತು ತಂತ್ರಾಂಶಕ್ಕೆ ಅದು ಅಪ್ಡೇಟ್‌ ಆಗಲಿದೆ. ಹೀಗಾಗಿ ಇ-ಖಾತಾ ಸಹ ದೊರೆಯಲಿದೆ. ಇದಕ್ಕೆ ಯಾರೊಬ್ಬರೂ ಅರ್ಜಿ ಸಲ್ಲಿಸಬೇಕಾಗಿಲ್ಲ. ನಮ್ಮ ಸಿಬ್ಬಂದಿಯೇ ಪ್ರತಿ ಊರಿನಲ್ಲೂ ಇಂಥ ಪ್ರದೇಶ ಗುರುತಿಸಿದ್ದು, ನಾವೇ ಡಿಸೆಂಬರ್‌ ಒಳಗಾಗಿ ಹಕ್ಕುಪತ್ರ ನೀಡುತ್ತೇವೆ ಎಂದು ಕೃಷ್ಣಬೈರೇಗೌಡ ಭರವಸೆ ನೀಡಿದರು.

ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು 2017ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕಾನೂನು ರಚಿಸಿತ್ತು. ಆದರೆ, ಹಿಂದಿನ ಸರ್ಕಾರ ಈ ಕಾನೂನನ್ನು 2023 ರವರೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿರಲ್ಲ. ಈ ಅವಧಿಯಲ್ಲಿ ಕೇವಲ 2,626 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿತ್ತು. 1500 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮ ಎಂದು ಘೋಷಿಸಲಾಗಿತ್ತು. 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಹತೆ ಇದ್ದಾಗ್ಯೂ ಬಿಟ್ಟುಹೋಗಿದ್ದ 4,250 ಅರ್ಹ ದಾಖಲೆ ರಹಿತ ಜನ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಡಿಸೆಂಬರ್‌ ತಿಂಗಳ ಒಳಗೆ ಇಷ್ಟೂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಲಾಗಿದೆ ಎಂದರು.

7,405 ಗ್ರಾಮಾಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್‌:

ರಾಜ್ಯದಲ್ಲಿ 7,500 ಗ್ರಾಮಾಡಳಿತ ಅಧಿಕಾರಿಗಳ ಸರ್ಕಲ್ ಇದ್ದು (ವಿಎ ಸರ್ಕಲ್) 8357 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ದಶಕಗಳಿಂದ ಕಚೇರಿಯೇ ಇರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಜೊತೆ ಚರ್ಚಿಸಿ ಕೇವಲ ನಾಲ್ಕು ತಿಂಗಳಿನಲ್ಲಿ 7,405 ವಿಎಗಳಿಗೆ ಗ್ರಾಪಂ ಕಚೇರಿಯಲ್ಲೇ ಕಚೇರಿ ಸೌಲಭ್ಯ ಒದಗಿಸಲಾಗಿದೆ. ಜತೆಗೆ ಅವರಿಗೆ ಇ-ಕಚೇರಿ ಮೂಲಕ ಕಾರ್ಯನಿರ್ವಹಿಸಲು 4,000 ಸಿಬ್ಬಂದಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ ಎಂದರು.

PREV
Read more Articles on

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ