ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಬಿಸಿಲಿನ ನಡುವೆ ದುಡಿಯುವ ಕೂಲಿ ಕಾರ್ಮಿಕರಿಗೆ ಕುಡಿವ ನೀರು, ನೆರಳು, ವಿಶ್ರಾಂತಿ ಸ್ಥಳ, ಮಕ್ಕಳ ಆರೈಕೆ, ಪ್ರಾಥಮಿಕ ಚಿಕಿತ್ಸೆಯಂತಹ ಅಗತ್ಯ ಸೌಲಭ್ಯ ಸಮರ್ಪಕವಾಗಿ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹೌದು. ತಾಲೂಕಿನ ವಣಗೇರಿ ಗ್ರಾಮದ ಕೆರೆಯಲ್ಲಿ ವಿಬಿಜಿ–ರಾಮ್ ಜಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಕೇಸೂರು, ತಳುವಗೇರಿ, ಬಿಜಕಲ್ ಗ್ರಾಪಂ ವ್ಯಾಪ್ತಿಯ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಕುಟುಂಬಗಳಿಗೆ ಕೆಲಸ ಸಿಕ್ಕಿರುವುದರಿಂದ ನೆಮ್ಮದಿ ಮೂಡಿದ್ದರೂ ಸ್ಥಳದಲ್ಲಿ ಸೌಲಭ್ಯಗಳ ಕೊರತೆ ಬೇಸರಕ್ಕೆ ಕಾರಣವಾಗಿದೆ.ಕಾಮಗಾರಿ ಸ್ಥಳದಲ್ಲಿ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಕೂಲಿಕಾರರು ಮನೆಯಿಂದಲೇ ನೀರು ತೆಗೆದುಕೊಂಡು ಬರಬೇಕಾಗಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ತಂದ ನೀರು ಸಾಲದಿದ್ದರೆ ಮತ್ತೆ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಎದುರಾಗಿದ್ದು, ಗ್ರಾಪಂನವರು ಕೆಲವೊಮ್ಮೆ ನೀರು ತಂದು ಕೊಟ್ಟರೂ ಅದು ಸಾಲುತ್ತಿಲ್ಲ.
ಮಕ್ಕಳ ಆರೈಕೆಗೆ ವ್ಯವಸ್ಥೆ ಇಲ್ಲ: ಮಹಿಳಾ ಕಾರ್ಮಿಕರೂ ಈ ಕಾಮಗಾರಿಯಲ್ಲಿ ಭಾಗವಹಿಸುತ್ತಿದ್ದು, ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಲು ಸಾಧ್ಯವಾಗದ ಕಾರಣ ಕೆಲವರು ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಬರುತ್ತಿದ್ದಾರೆ. ಆದರೆ ಮಕ್ಕಳನ್ನು ನೋಡಿಕೊಳ್ಳಲು ಪ್ರತ್ಯೇಕ ಸ್ಥಳವೂ ಇಲ್ಲ. ಇದರಿಂದ ಮಹಿಳೆಯರು ಒಂದೆಡೆ ಕೂಲಿ ಕೆಲಸ ಮಾಡುತ್ತಲೇ ಮತ್ತೊಂದೆಡೆ ಮಕ್ಕಳ ಮೇಲೂ ನಿಗಾ ಇಡಬೇಕಾದ ಅನಿವಾರ್ಯತೆ ಎದುರಾಗಿದೆ.
ವಣಗೇರಿ ಕೆರೆಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಕುಡಿವ ನೀರು, ವಿಶ್ರಾಂತಿ ಪಡೆಯಲು ನೆರಳಿನ ಜಾಗ ಇಲ್ಲ. ಬಿಸಿಲಿನಲ್ಲೇ ಕುಳಿತು ಊಟ ಮಾಡುವ ಪರಿಸ್ಥಿತಿ ಇದ್ದು ಮೂಲಸೌಲಭ್ಯ ಒದಗಿಸಿಕೊಟ್ಟರೆ ಕೂಲಿಕಾರರಿಗೆ ಅನೂಕೂಲವಾಗಲಿದೆ ಎಂದು ಕೂಲಿಕಾರ ನಾನಪ್ಪ ರಾಠೋಡ ತಿಳಿಸಿದ್ದಾರೆ.
ಅನುದಾನ ಬಾರದ ಕಾರಣದಿಂದ ಗ್ರಾಪಂನವರು ಕರವಸೂಲಾತಿಯ ಹಣದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಮಾಡಬೇಕಿದ್ದು, ಕೂಲಿಕಾರರಿಗೆ ನೀರು ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂದಿಸಿದ ಪಿಡಿಒಗೆ ಸೂಚನೆ ನೀಡಲಾಗುವುದು ಎಂದು ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ತಿಳಿಸಿದ್ದಾರೆ.