ಬೆಳೆನಷ್ಟ ಪರಿಹಾರಕ್ಕಾಗಿ ಉಪಗ್ರಹ ದತ್ತಾಂಶ, ಜಂಟಿ ಸಮೀಕ್ಷೆ ಮಾಡಿ: ಡಿಸಿ ಸೂಚನೆ

KannadaprabhaNewsNetwork |  
Published : Aug 22, 2026, 02:00 AM IST
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಮಾತನಾಡಿದರು. | Kannada Prabha

ಸಾರಾಂಶ

ಪ್ರಸಕ್ತ ಮುಂಗಾರು ಋತುವಿನಲ್ಲಿ ಎದುರಾಗಿರುವ ಪ್ರಕೃತಿ ವಿಕೋಪ ಹಾಗೂ ಬರದಂತಹ ಹವಾಮಾನ ಪರಿಸ್ಥಿತಿಯಿಂದಾಗಿ ರೈತರ ಬೆಳೆಗಳು ತೀವ್ರ ಹಾನಿಗೊಳಗಾಗಿವೆ.

ಗದಗ: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯ ವ್ಯತ್ಯಯ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳು ಎದುರಿಸುತ್ತಿರುವ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಧ್ಯೆ ಋತು ಸಂಕಷ್ಟ ನಿಯಮಾವಳಿಗಳನ್ನು ಜಾರಿಗೊಳಿಸುವ ಕುರಿತು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಲು ಉಪಗ್ರಹ ದತ್ತಾಂಶ ಹಾಗೂ ಜಂಟಿ ಕ್ಷೇತ್ರ ಸಮೀಕ್ಷೆಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಮುಂಗಾರು ಹಂಗಾಮಿನ ಬೆಳೆಗಳಿಗೆ ಮದ್ಯ ಋತು ಸಂಕಷ್ಟ ಜಾರಿ ಕುರಿತು ಜಿಲ್ಲಾ ಮಟ್ಟದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ಮುಂಗಾರು ಋತುವಿನಲ್ಲಿ ಎದುರಾಗಿರುವ ಪ್ರಕೃತಿ ವಿಕೋಪ ಹಾಗೂ ಬರದಂತಹ ಹವಾಮಾನ ಪರಿಸ್ಥಿತಿಯಿಂದಾಗಿ ರೈತರ ಬೆಳೆಗಳು ತೀವ್ರ ಹಾನಿಗೊಳಗಾಗಿವೆ. ಆದ್ದರಿಂದ ರೈತರಿಗೆ ಶೀಘ್ರವಾಗಿ ಆರ್ಥಿಕ ನೆರವು ಕಲ್ಪಿಸಲು ಮಿಡ್ ಸೀಸನ್ ಅಡ್ವರ್ಸಿಟಿ ನಿಯಮದಡಿ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದರು.

ಮಳೆ ಅಭಾವ ಅಥವಾ ದೀರ್ಘಕಾಲದ ಒಣಹವೆಯಿಂದಾಗಿ ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟ ಉಂಟಾಗಿರುವ ಸಾಧ್ಯತೆ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ವಯ ರೈತರಿಗೆ ಶೇ. 25ರಷ್ಟು ಮುಂಗಡ ಮಧ್ಯಂತರ ಪರಿಹಾರ ತಲುಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬೆಳೆಗಳ ಬೆಳವಣಿಗೆ ಹಾಗೂ ತೇವಾಂಶದ ಕೊರತೆಯನ್ನು ನಿಖರವಾಗಿ ವಿಶ್ಲೇಷಿಸಲು ಮಳೆ ಆಧರಿತ ಉಪಗ್ರಹ ದತ್ತಾಂಶಗಳನ್ನು ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಜಂಟಿ ಕ್ಷೇತ್ರ ಸಮೀಕ್ಷೆ ನಡೆಸಲು ವಿಮಾ ಕಂಪನಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಬಾಧಿತ ಕೃಷಿ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸಲು ನಿರ್ದೇಶಿಸಿದರು.

ಬೆಳೆ ಕೊಯ್ಲು ಮುಕ್ತಾಯಗೊಳ್ಳುವ ಮುನ್ನವೇ ಎಂಎಸ್ಎ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರೈತರಿಗೆ ನ್ಯಾಯಯುತ ಪರಿಹಾರ ಸಿಗುವಂತೆ ನೋಡಿಕೊಳ್ಳಲು ಸೂಚಿಸಲಾಯಿತು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಹಾಗೂ ಇತರ ಬೆಳೆಗಳ ಪ್ರಸ್ತುತ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಎನ್‌ಡಿವಿಐ ಹಾಗೂ ತೇವಾಂಶ ಸೂಚಿ ಆಧರಿತ ಮಾಹಿತಿಗಳನ್ನು ಪರಿಶೀಲಿಸಿ, ಎಂಎಸ್‌ಎ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸಕ್ರಿಯಗೊಳಿಸಬಹುದಾದ ಬೆಳೆ ನಿಯೋಜಿತ ಘಟಕಗಳನ್ನು ಗುರುತಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಬೆಳೆಗಳ ಪ್ರಸ್ತುತ ಸ್ಥಿತಿಗತಿ ಹಾಗೂ ರೈತರಿಗೆ ವಿಮಾ ಯೋಜನೆಯಡಿ ತಕ್ಷಣದ ಮಧ್ಯಂತರ ಪರಿಹಾರ ಒದಗಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಈ ವೇಳೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಶೀಲಾ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ
ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ಹೈಡ್ರಾಮಾ