ಗದಗ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ ಎಂದು ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಪ್ರಸ್ತತ ಭಾರತದಲ್ಲಿ 8.5 ಲಕ್ಷಕ್ಕೂ ಹೆಚ್ಚ ಸಹಕಾರ ಸಂಘಗಳು ಇದ್ದು, 32 ಕೋಟಿ ಸದಸ್ಯರು ಹಾಗೂ 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಕ್ಷೇತ್ರವು ಕೇವಲ ಗ್ರಾಮೀಣ ಸಾಲ ಅಥವಾ ಹಾಲು ಉತ್ಪಾದನೆಗೆ ಸೀಮಿತವಾದ ವ್ಯವಸ್ಥೆ ಅಲ್ಲ. ಇದು ರೈತ, ಕಾರ್ಮಿಕ, ಮಹಿಳೆ, ಸಣ್ಣ ಉದ್ಯಮ ಮತ್ತು ಗ್ರಾಹಕರನ್ನು ಒಟ್ಟುಗೂಡಿಸಿ ದೇಶದ ಉತ್ಪಾದನೆ ಉದ್ಯೋಗ, ಹಣಕಾಸು ಒಳಗೊಳ್ಳುವಿಕೆ ಮತ್ತು ಗ್ರಾಮೀಣ ಸಮೃದ್ಧಿಯನ್ನು ಹೆಚ್ಚಸುವ ಒಂದು ದೊಡ್ಡ ಆರ್ಥಿಕ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಯುವಕರು ತಂತ್ರಜ್ಞಾನ ಮತ್ತು ಡಿಜಿಟಲೀಕರಣ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದುವ ಮೂಲಕ ಸಹಕಾರ ಸಂಘಗಳನ್ನು ಡಿಜಿಟಲ್, ಪಾರದರ್ಶಕ, ಹೊಸ ಉದ್ಯಮ ಮತ್ತು ಉದ್ಯೋಗ ಸೃಷ್ಠಿ ಸ್ಟಾರ್ಟ್ಅಪ್, ಕೃಷಿ ಸಂಸ್ಕರಣೆ, ಇ- ಕಾಮರ್ಸ್ ಈ ಉದ್ಯಮಗಳೊಂದಿಗೆ ಜೋಡಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.ಈ ವೇಳೆ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಮೆಡಲ್, ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.