ಈ ಇಬ್ಬರೂ ಗಣ್ಯರು ಮುಂಡರಗಿ ತಾಲೂಕಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಿದ್ದಾರೆ. ಇದೀಗ ಇಬ್ಬರು ನಾಯಕರು ಉನ್ನತ ಸ್ಥಾನ ಅಲಂಕರಿಸಿದ್ದು, ಕ್ಷೇತ್ರದ ಅಭಿವೃದ್ಧಿಯ ನಿರೀಕ್ಷೆಗಳು ಜನರಲ್ಲಿ ಗರಿಗೆದರಿವೆ.
ಶರಣು ಸೊಲಗಿ
ಮುಂಡರಗಿ: ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿರುವ ಮುಂಡರಗಿಗೆ ನೂತನ ಸ್ಪೀಕರ್ ಜಿ.ಎಸ್. ಪಾಟೀಲ ಹಾಗೂ ಸಭಾಪತಿ ಸಲೀಂ ಅಹ್ಮದ್ ಅವರಿಂದ ಅಭಿವೃದ್ಧಿಗೆ ವೇಗ ಸಿಕ್ಕಿತೆ ಎಂಬ ನಿರೀಕ್ಷೆ ಕ್ಷೇತ್ರದ ಜನತೆಯದ್ದಾಗಿದೆ.
2008ರ ಕ್ಷೇತ್ರ ಮರುವಿಂಗಡಣೆಯಲ್ಲಿ ಮುಂಡರಗಿ ವಿಧಾನಸಭಾ ಮತಕ್ಷೇತ್ರ ಸ್ಥಾನಮಾನ ಕಳೆದುಕೊಂಡ ನಂತರ ತಾಲೂಕು ನಿರಂತರ ನಿರ್ಲಕ್ಷ್ಯ ಮತ್ತು ಅನಾಥಪ್ರಜ್ಞೆಗೆ ಒಳಗಾಗಿದೆ. ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ.
ಇದೀಗ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರು ವಿಧಾನಸಭೆ ಸಭಾಧ್ಯಕ್ಷರಾಗಿ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಪರಿಷತ್ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಇಬ್ಬರೂ ಗಣ್ಯರು ಮುಂಡರಗಿ ತಾಲೂಕಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಿದ್ದಾರೆ. ಇದೀಗ ಇಬ್ಬರು ನಾಯಕರು ಉನ್ನತ ಸ್ಥಾನ ಅಲಂಕರಿಸಿದ್ದು, ಕ್ಷೇತ್ರದ ಅಭಿವೃದ್ಧಿಯ ನಿರೀಕ್ಷೆಗಳು ಜನರಲ್ಲಿ ಗರಿಗೆದರಿವೆ.
ಮುಖ್ಯವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಸಾವಿರಾರು ಕೋಟಿ ರುಪಾಯಿ ಅನುದಾನ ಖರ್ಚಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹನಿ ನೀರಾವರಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ರೈತರಿಗೆ ನೇರವಾಗಿ ಕಾಲುವೆ ಮೂಲಕವೇ ನೀರು ಹರಿಸಬೇಕೆಂಬುದು ಫಲಾನುಭವಿಗಳ ಪ್ರಮುಖ ಬೇಡಿಕೆಯಾಗಿದೆ.
ಮುಳುಗಡೆ ಗ್ರಾಮಗಳ ಸ್ಥಳಾಂತರ: ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬಿದರಹಳ್ಳಿ ಗ್ರಾಮ ಶೇ. 50ರಷ್ಟು ಮಾತ್ರ ಸ್ಥಳಾಂತರಗೊಂಡಿದೆ. ಹೊಸ ಗುಮ್ಮಗೋಳ ಗ್ರಾಮಕ್ಕೆ ಬೆರಳೆಣಿಕೆಯ ಕುಟುಂಬಗಳಷ್ಟೇ ತೆರಳಿದ್ದು, ಹೆಚ್ಚಿನವರು ಬಾಕಿ ಉಳಿದಿದ್ದಾರೆ. ವಿಠಲಾಪುರ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ಸರ್ಕಾರದ ಹಂತದಲ್ಲೇ ಬಾಕಿ ಉಳಿದಿದೆ.
ಜಾಲವಾಡಗಿ ಯೋಜನೆ ಗದಗ, ರೋಣ ಹಾಗೂ ಶಿರಹಟ್ಟಿ ಮತಕ್ಷೇತ್ರಗಳ ಕೆರೆ ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ಶೀಘ್ರ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಬೇಕಿದೆ.
ತೋಟಗಾರಿಕೆ ಕಾಲೇಜು: ಡಂಬಳ ಹೋಬಳಿಗೆ ಮಂಜೂರಾಗಿರುವ ತೋಟಗಾರಿಕೆ ಕಾಲೇಜಿಗೆ ಕೂಡಲೇ ಜಮೀನು ಖರೀದಿ ಪ್ರಕ್ರಿಯೆ ಮುಗಿಸಿ ಶಂಕುಸ್ಥಾಪನೆ ನೆರವೇರಿಸಬೇಕಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ಪಟ್ಟಣದಲ್ಲಿ ಸ್ಥಗಿತಗೊಂಡಿರುವ 24x7 ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಮರುಚಾಲನೆ ಪಡೆಯಬೇಕಿದೆ. ಪಟ್ಟಣದ ಬಹುದಿನಗಳ ಬೇಡಿಕೆಯಾದ ಸಮರ್ಪಕ ಒಳಚರಂಡಿ (ಯುಜಿಡಿ) ವ್ಯವಸ್ಥೆಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ.
ರಸ್ತೆಗಳ ದುರಸ್ತಿ: ಪಟ್ಟಣದಾದ್ಯಂತ ಹಾಳಾಗಿರುವ ಪ್ರಮುಖ ರಸ್ತೆಗಳ ನವೀಕರಣ ತುರ್ತಾಗಿ ಆಗಬೇಕಿದೆ. ಇದಕ್ಕಾಗಿ ಇಬ್ಬರು ನಾಯಕರು ಮನಸ್ಸು ಮಾಡಿದರೆ ಅದು ಸಾಧ್ಯವಾಗುತ್ತದೆ.
ನಿರಾಶ್ರಿತರ ನಿವೇಶನ: ಶಿರೋಳ ಗ್ರಾಮದ ಬಳಿ ನಿರಾಶ್ರಿತರಿಗಾಗಿ ಖರೀದಿಸಲಾದ 25 ಎಕರೆ ಜಮೀನು 8 ವರ್ಷಗಳಿಂದ ಹಂಚಿಕೆಯಾಗದೆ ಉಳಿದಿದ್ದು, ಶೀಘ್ರವೇ ಅರ್ಹರಿಗೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವ ಕಾರ್ಯ ಆಗಬೇಕಿದೆ. ತಾಲೂಕಿನಲ್ಲಿ ನೀರಾವರಿ ಸೇರಿದಂತೆ ಅನೇಕ ಮೂಲ ಸೌಕರ್ಯ ಯೋಜನೆಗಳು ದಶಕಗಳಿಂದ ಬಾಕಿ ಉಳಿದಿವೆ.
ವಿಶೇಷ ಅನುದಾನ: ಇದೀಗ ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇಬ್ಬರು ನಾಯಕರು ಉಭಯ ಸದನಗಳ ಮುಖ್ಯಸ್ಥರಾಗಿರುವುದು ಆಶಾದಾಯಕ ಬೆಳವಣಿಗೆ. ಇವರು ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಅನುದಾನದ ಮೂಲಕ ಮುಂಡರಗಿಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಮುಖಂಡರಾದ ಕರಬಸಪ್ಪ ಹಂಚಿನಾಳ ತಿಳಿಸಿದರು.ನವಿಲುಧಾಮ ನಿರ್ಮಾಣವಾಗಲಿ...
ತಾಲೂಕಿನ ಸಿಂಗಟಾಲೂರು ಹತ್ತಿರ ನವಿಲುಗಳ ಸಂಖ್ಯೆ ಹೆಚ್ಚಾಗಿದ್ದು, ವೀರಭದ್ರೇಶ್ವರ ಸುಕ್ಷೇತ್ರದ ಹತ್ತಿರ ನವಿಲುಧಾಮ ಮಾಡಬೇಕು. ಈಗಾಗಲೇ ಅಲ್ಲಿ ಉದ್ಯಾನವನ ಇದ್ದು, ಹಮ್ಮಿಗಿ ಹತ್ತಿರ ಬ್ಯಾರೇಜ್ ಇದ್ದು, ನವಿಲು ಧಾಮವೂ ಸೇರಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಇದೊಂದು ಪ್ರವಾಸಿತಾಣವಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.