ಮಾತಿನುದ್ದಕ್ಕೂ ಹಾಸ್ಯ ನುಡಿಗಳ ಮೂಲಕ ಸೇರಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪ್ರೇಕ್ಷಕರನ್ನು ರಂಜಿಸಿದ ಅರವಿಂದ ಬೋಳಾರ್, ನಮ್ಮೂರಿನ ಜಾತ್ರೆ, ಹಬ್ಬ ಹರಿದಿನಗಳಂತೆ ಪ್ರಜಾಪ್ರಭುತ್ವದ ಹಬ್ಬವನ್ನು ನಾವು ನೆನಪಿಟ್ಟು ಸಂಭ್ರಮಿಸಬೇಕು. ಮತದಾನದ ಶೇಕಡಾವಾರು ಕಡಿಮೆ ಆಗುತ್ತಿದೆ ಎಂಬ ಆತಂಕವನ್ನು ದೂರ ಮಾಡಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಜಾಪ್ರಭುತ್ವದಲ್ಲಿ ಮತದಾರರ ಪ್ರತಿಯೊಂದು ಮತವೂ ಮೌಲ್ಯಯುತವಾಗಿದ್ದು, ಜವಾಬ್ದಾರಿಯುತ ಮತ ಚಲಾವಣೆಯಿಂದ ಈ ದೇಶದ ರಕ್ಷಣೆ ಸಾಧ್ಯವಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಆಶ್ರಯದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜು ಆವರಣದ ರವೀಂದ್ರ ಕಲಾಭನವನದಲ್ಲಿ ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಚಾಲನೆ ನೀಡಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಅತೀ ದೊಡ್ಡ ಹಬ್ಬವಾಗಿದ್ದು, ದ.ಕ.ಜಿಲ್ಲೆಯಲ್ಲಿಯೇ ಈ ಹಬ್ಬವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವಲ್ಲಿ ಈ ಪ್ರಕ್ರಿಯೆಯಲ್ಲಿ ಸರಕಾರಿ ಯಂತ್ರದ ಸುಮಾರು ೧೮,೦೦೦ದಷ್ಟು ಅಧಿಕಾರಿ, ಸಿಬ್ಬಂದಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮತದಾನ ದಿನದಂದು ಜಿಲ್ಲೆಯ ೧,೮೭೬ ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೊರತುಪಡಿಸಿ ೧೧,೫೦೦ರಷ್ಟು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಪೊಲೀಸರು ಸೇರಿದಂತೆ ೨,೫೦೦ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಇರುತ್ತಾರೆ. ಹಾಗಾಗಿ ಮತದಾರರು ನಿರ್ಭೀತವಾಗಿ ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಬಹುದು. ಕಾಲೇಜು ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ತಮ್ಮವರಿಗೆ ತಿಳಿಸುವ ಜತೆಗೆ ಮತದಾನದ ದಿನಾಂಕಕ್ಕೆ ಮುಂಚಿತವಾಗಿಯೇ ವೋಟರ್ಸ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ಮತದಾರರ ಹೆಸರು ಇರುವುದನ್ನು ಖಾತರಿಪಡಿಸಲು ಸಹಕರಿಸಬೇಕು ಎಂದು ಕರೆ ನೀಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ, ವಿದ್ಯುಚ್ಛಕ್ತಿ, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಚುನಾವಣೆಯ ಅಕ್ರಮಗಳಿಗೆ ಸಂಬಂಧಿಸಿ ದೂರುದಾರರು ಗೌಪ್ಯವಾಗಿ ಸಿವಿಜಿಲ್ ಮೂಲಕ ದುರು ಸಲ್ಲಿಸಬಹುದು ಎಂದರು. ಜಿಲ್ಲಾ ಚುನಾವಣಾ ಆಯೋಗದಿಂದ ಆಯ್ಕೆಯಾಗಿರುವ ಜಿಲ್ಲಾ ಚುನಾವಣಾ ಐಕಾನ್, ಹಾಸ್ಯನಟ, ಕಲಾವಿದ ಅರವಿಂದ ಬೋಳಾರ್ ಅವರು ತುಳುವಿನಲ್ಲೇ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ತಮ್ಮ ಮನೆಯವರು, ನೆರೆಹೊರೆಯವರು ಮಾತ್ರವಲ್ಲದೆ ಹೊರ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಂಬಂಧಿಕರಿಗೆ ಮತದಾನ ಮಾಡಲು ಮರೆಯದಂತೆ (ವೋಟ್ ಪಾಡುನ ಮರಪೊಚ್ಚಿಂದ್ ಪನ್ಲೆ) ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು. ಮಾತಿನುದ್ದಕ್ಕೂ ಹಾಸ್ಯ ನುಡಿಗಳ ಮೂಲಕ ಸೇರಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪ್ರೇಕ್ಷಕರನ್ನು ರಂಜಿಸಿದ ಅರವಿಂದ ಬೋಳಾರ್, ನಮ್ಮೂರಿನ ಜಾತ್ರೆ, ಹಬ್ಬ ಹರಿದಿನಗಳಂತೆ ಪ್ರಜಾಪ್ರಭುತ್ವದ ಹಬ್ಬವನ್ನು ನಾವು ನೆನಪಿಟ್ಟು ಸಂಭ್ರಮಿಸಬೇಕು. ಮತದಾನದ ಶೇಕಡಾವಾರು ಕಡಿಮೆ ಆಗುತ್ತಿದೆ ಎಂಬ ಆತಂಕವನ್ನು ದೂರ ಮಾಡಬೇಕು ಎಂದು ಹೇಳಿದರು. ಪಾಲಿಕೆ ಆಯುಕ್ತ ಆನಂದ್, ಖ್ಯಾತ ವ್ಯಂಗ್ಯಚಿತ್ರಗಾರ ಜಾನ್ ಚಂದ್ರನ್ ಇದ್ದರು. ತಸ್ನೀಮ್ ಸ್ವಾಗತಿಸಿದರು. ಕಾಲೇಜು ಪ್ರಾಂಶುಪಾಲೆ ಡಾ. ಅನುಸೂಯ ರೈ ವಂದಿಸಿದರು. ಪ್ರಾಧ್ಯಾಪಕಿ ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮಕ್ಕೆ ಮೊದಲು ಖ್ಯಾತ ವ್ಯಂಗ್ಯಚಿತ್ರಗಾರ ಜಾನ್ ಚಂದ್ರನ್ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ರಚಿಸಿದ ವ್ಯಂಗ್ಯಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಬಳಿಕ ವೇದಿಕೆಯಲ್ಲಿ ಗಿರೀಶ್ ನಾವಡ ಯಕ್ಷಗಾನ ತಂಡದಿಂದ ಮತದಾನ ಜಾಗೃತಿಯನ್ನು ಮೂಡಿಸಲಾಯಿತು. ನಂತರ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ವಾಕಥಾನ್ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.